ಚೆಯ್ಯಂಡಾಣೆ ಜ.20 : NEWS DESK : ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾದ 1.8 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲ-ಪೈನರಿ ಮಸೀದಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಕುಂಜಿಲ ಗ್ರಾಮಕ್ಕೆ ಭೇಟಿ ನೀಡಿದಾಗ ಹಲವಾರು ವರ್ಷಗಳಿಂದ ಇಲ್ಲಿನ ಗ್ರಾಮಸ್ಥರು ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಬೇಡಿಕೆಯನ್ನು ಇಟ್ಟಿದ್ದರು. ಅದರಂತೆ ಇಂದು ಗ್ರಾಮಸ್ಥರೊಂದಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಮುಂದಿನ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದಾರೆ. ಕಾಮಗಾರಿಯಲ್ಲಿ ಯಾವುದೇ ಸಮಸ್ಯೆ ಕಂಡುಬಂದಲ್ಲಿ ಗ್ರಾಮಸ್ಥರು ಅಭಿಯಂತರ ಗಮನಕ್ಕೆ ತರಬೇಕು. ಗ್ರಾಮದಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಲು ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಎ.ಇಸ್ಮಾಯಿಲ್, ಕುಂಜಿಲ ಜಮಾಅತ್ ಅಧ್ಯಕ್ಷ ಸೌಕತ್ ಅಲಿ, ಉಪಾಧ್ಯಕ್ಷ ಇಬ್ರಾಹಿಂ, ಪಂಚಾಯಿತಿ ಸದಸ್ಯರಾದ ಬಶೀರ್, ರಜಾಕ್, ಮಾಜಿ ಅಧ್ಯಕ್ಷ ಹಂಸ, ಕಲಿಯಂಡ ಸಂಪನ್ ಅಯ್ಯಪ್ಪ, ಪಂಚಾಯತ್ ಮಾಜಿ ಉಪಾಧ್ಯಕ್ಷ ಉಸ್ಮಾನ್, ಮಾಜಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಸತೀಶ್, ಗುತ್ತಿಗೆದಾರ ಬಾಬು ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ : -ಅಶ್ರಫ್