ಮಡಿಕೇರಿ ಜ.21 NEWS DESK : ಸಮಾಜದ ಬಡ ಜನರು, ರೈತಾಪಿ ವರ್ಗಕ್ಕೆ ಆರ್ಥಿಕ ಚೈತನ್ಯವನ್ನು ಒದಗಿಸುವ ಮೂಲಕ ‘ಸಹಕಾರಿ ಚಳವಳಿ’ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜನಹಿತದ ದೃಷ್ಟಿಯಿಂದ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಯಬಾರದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿ(ಕೆಡಿಸಿಸಿ)ನ ಶತಮಾನೋತ್ಸವದ ಹಿನ್ನೆಲೆ ನಿರ್ಮಿಸಲಾಗಿರುವ ‘ಉನ್ನತಿ’ ಭವನವನ್ನು ಉದ್ಘಾಟಿಸಿ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನ ಸಾಮಾನ್ಯರ ಸಬಲೀಕರಣಕ್ಕೆ ಸರ್ಕಾರಗಳು ಮಾಡಲಾಗದ ಕೆಲಸಗಳನ್ನು ಸಹಕಾರ ಕ್ಷೇತ್ರದ ಮೂಲಕ ಮಾಡಲು ಸಾಧ್ಯವಿದೆ. ರೈತ ಸಮೂಹ, ಬಡವರ್ಗದ ಮಂದಿಗೆ ಸಾಲ ಸೌಲಭ್ಯವನ್ನು ನೀಡುವ ಮೂಲಕ ಅವರಲ್ಲಿ ಆರ್ಥಿಕ ಭದ್ರತೆಯನ್ನು ಮೂಡಿಸಲು ಸಾಧ್ಯವಿದೆ. ಈ ಹಿನ್ನೆಲೆ ಸಹಕಾರಿ ಬ್ಯಾಂಕ್‌ಗಳು ಹೆಚ್ಚಿನ ಸಾಲ ಸೌಲಭ್ಯದ ನೆರವನ್ನು ಒದಗಿಸಲು ಮುಂದಾಗುವಂತೆ ಕರೆ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಶಕ್ತಿಯುತವಾಗಿರುವುದಕ್ಕೆ ಸಹಕಾರಿ ಕ್ಷೇತ್ರವೂ ಕಾರಣವಾಗಿದೆ. ಇಂತಹ ಕ್ಷೇತದಲ್ಲಿ ‘ರಾಜಕೀಯ’ವನ್ನು ದೂರವಿಟ್ಟು ಜನಹಿತಕ್ಕಾಗಿ ಕಾರ್ಯನಿರ್ವಹಿಸುವುದು ಅತ್ಯವಶ್ಯ. ಸಹಕಾರಿ ಸಂಸ್ಥೆಗಳಲ್ಲಿ ಯಾವುದೇ ಕಾರಣಕ್ಕೂ ಹಣಸೋರಿಕೆಗೆ ಅವಕಾಶವನ್ನು ನೀಡಬಾರದು. ಜಿಲ್ಲೆಯ ಸಹಕಾರಿ ಸಂಸ್ಥೆಗಳಲ್ಲಿ ಅಂತಹ ಉದಾಹರಣೆಗಳು ಇಲ್ಲವೆಂದು ಹೇಳಿದರು.
ಬ್ಯಾಂಕಿನ ಭದ್ರತಾಕೊಠಡಿಯನ್ನು ಉದ್ಘಾಟಿಸಿದ ಸಂಸದ ಪ್ರತಾಪ ಸಿಂಹ, ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಅರಿಯದ ಸಿಬ್ಬಂದಿಗಳು ಕಾರ್ಯನಿರ್ವಹಿಸುವುದರಂದ ಸಾರ್ವಜನಿಕರಿಗೆ ಸೂಕ್ತ ಸ್ಪಂದನ ದೊರಕುತ್ತಿಲ್ಲ. ಅದೇ ಸಹಕಾರಿ ಬ್ಯಾಂಕ್‌ಗಳು ಸ್ಥಳೀಯರ ನಡುವೆಯೇ ಇರುವುದರಿಂದ ಜನಸಾಮಾನ್ಯರೊಂದಿಗಿನ ಅದರ ಸಂಬಂಧ ಉತ್ತಮವಾಗಿದೆ. ಈ ಹಿನ್ನೆಲೆ ಸಹಕಾರಿ ಬ್ಯಾಂಕ್‌ಗಳು ಜನರೊಂದಿಗಿನ ಆಪ್ತ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡು ಬೆಳೆಯಬೇಕೆಂದು ಕರೆ ನೀಡಿದರು.
ಶಾಸಕ ಡಾ.ಮಂತರ್ ಗೌಡ ಅವರು ಬ್ಯಾಂಕಿನ ಆವರಣದಲ್ಲಿ ಕಾವೇರಿ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿ, ಬದಲಾಗುತ್ತಿರುವ ವಾಣಿಜ್ಯಕ ವ್ಯವಹಾರಗಳಿಗೆ ತಕ್ಕಂತೆ ಸಹಕಾರಿ ಬ್ಯಾಂಕ್‌ಗಳಲ್ಲಿ ‘ಕೋರ್’ ಬ್ಯಾಂಕಿಂಗ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಯುವ ಗ್ರಾಹಕರನ್ನು ಸಹಕಾರಿ ಬ್ಯಾಂಕ್ ವ್ಯಾಪ್ತಿಗೆ ತರಲು ಮುಂದಾಗಬೇಕೆAದು ಸಲಹೆಯನ್ನಿತ್ತರು.
ಶತಮಾನಗಳ ಹಿಂದೆ 1904 ರಲ್ಲಿ ಕೊಡಗಿನ ಶಾಂತಳ್ಳಿಯಲ್ಲಿ ದೊಡ್ಡೇಗೌಡರಿಂದ ಪ್ರಥಮ ಸಹಕಾರಿ ಸಂಘ ಅಸ್ತಿತ್ವಕ್ಕೆ ಬಂದಿದೆ. ಪ್ರಸ್ತುತ ಅಲ್ಲಿನ ಸಹಕಾರಿ ಸಂಘದಲ್ಲಿ ದೊಡ್ಡೇಗೌಡ ಅವರ ಪುತ್ತಳಿ ಸ್ಥಾಪಿಸಬೇಕೆಂದು ಅವರ ಕುಟುಂಬದವರು ಕೋರಿದ್ದಾರೆ. ಅದಕ್ಕೆ ಅವಕಾಶ ಒದಗಿಸುವಂತೆ ಶಾಸಕರು ಕೋರಿದರು.
ಕೇಂದ್ರ ಕಾಯ್ದೆ ಅನ್ವಯವಾಗಲಾರದು- ಮಾಜಿ ಸಚಿವ ಎಂ.ಸಿ. ನಾಣಯ್ಯ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ಕೇಂದ್ರದಲ್ಲಿ ಸಹಕಾರಿ ಸಚಿವರನ್ನು ನೇಮಕ ಮಾಡಲಾಗಿದೆ. ಆ ಮೂಲಕ ಕೇಂದ್ರ ಜಾರಿ ಮಾಡುವ ಕಾಯ್ದೆಗಳನ್ನು ಇಡೀ ರಾಷ್ಟçದ ಎಲ್ಲಾ ರಾಜ್ಯಗಳಲ್ಲಿ ಅನ್ವಯ ಮಾಡಲು ಸಾಧ್ಯವಾಗಲಾರದು. ಇಲ್ಲಿಯವರೆಗೆ ಸಹಕಾರಿ ಸಂಘಗಳು ಆಯಾ ರಾಜ್ಯದ ಅಧೀನದಲ್ಲಿ ತಮ್ಮದೇ ಆದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆಯೆಂದು ತಿಳಿಸಿ, ಈ ಅಂಶವನ್ನು ನ್ಯಾಯಾಲಯವು ಬೊಟ್ಟು ಮಾಡಿದ್ದು, ಕೇಂದ್ರದ ಸಹಕಾರಿ ಕಾಯ್ದೆಗಳು ರಾಜ್ಯದ ಸಹಕಾರಿ ಸಂಘಗಳಿಗೆ ಅನ್ವಯವಾಗಲಾರದೆಂದು ಅಭಿಪ್ರಾಯಿಸಿದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸಣ್ಣ ಪ್ರಮಾಣದ ಸಾಲ ವಿತರಣೆಯಿಂದ ಮಾತ್ರ ರಾಷ್ಟçದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲು ಸಾಧ್ಯ. ಯಾವುದೋ ಒಬ್ಬರಿಗೆ ನೂರಾರು ಕೋಟಿ ಸಾಲ ಸೌಲಭ್ಯ ಒದಗಿಸುವುದಕ್ಕೆ ಬದಲಾಗಿ, ಸಣ್ಣ ಪ್ರಮಾಣದ ಸಾಲವನ್ನು ವಿತರಿಸಿದಲ್ಲಿ ಜನರ ಆರ್ಥಿಕ ಚೈತನ್ಯ ಹೆಚ್ಚುತ್ತದೆನ್ನುವ ಅನಿಸಿಕೆ ವ್ಯಕ್ತಪಡಿಸಿದರು.
ಎಂಎಲ್‌ಸಿ ಎಂ.ಪಿ. ಸುಜಾ ಕುಶಾಲಪ್ಪ ಅವರು ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ರಾವ್ ಬಹದ್ದೂರ್ ಕೊಡಂದೇರ ಕುಟ್ಟಯ್ಯನವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು.
ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಮಡಿಕೇರ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ ಸೇರಿದಂತೆ ಹಲ ಗಣ್ಯರು ಉಪಸ್ಥಿತರಿದ್ದರು.