ಮಡಿಕೇರಿ ಜ.22 NEWS DESK : ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗಾಗಿ ಒತ್ತಾಯಿಸಿ ಗಣರಾಜ್ಯೋತ್ಸವದ ದಿನವಾದ ಜ.26 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರ್ಧರಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಆದಿಮಸಂಜಾತ ಕೊಡವರಿಗೆ ಕೊಡವ ಲ್ಯಾಂಡ್ ಮೂಲಕ ಸಾಂವಿಧಾನಿಕ ಭದ್ರತೆ ನೀಡಿದಾಗ ಮಾತ್ರ ಗಣರಾಜ್ಯೋತ್ಸವದ ದಿನ ಪರಿಪೂರ್ಣವಾಗಲು ಸಾಧ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.
ಆಂತರಿಕ ಸ್ವ-ನಿರ್ಣಯದ ಹಕ್ಕುಗಳಿಗಾಗಿ ಕಳೆದ 34 ವರ್ಷಗಳಿಂದ ಸಿಎನ್‌ಸಿ ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ. ಬೇಡಿಕೆ ಈಡೇರದ ಕಾರಣ ಈ ಬಾರಿಯ 74ನೇ ಗಣರಾಜ್ಯೋತ್ಸವದಂದು ಕೂಡ ಕೊಡವ ಆತ್ಮಸಾಕ್ಷಿ, ಕೊಡವ ಒಮ್ಮತ ಮತ್ತು ಕೊಡವ ಪ್ರಜ್ಞೆಯ ಅಭಿವ್ಯಕ್ತಿಯನ್ನು ದೃಢೀಕರಿಸಲಾಗುವುದು. ಶುಕ್ರವಾರ ಬೆಳಿಗ್ಗೆ 10.30 ರಿಂದ 11.30 ಗಂಟೆಯವರೆಗೆ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು.
ಸಂವಿಧಾನದ ಆರ್ಟಿಕಲ್ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ, ಸ್ಥಳೀಯ ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆ ಮಾನ್ಯತೆ ಮತ್ತು ಮಿನಿಸ್ಕ್ಯೂಲ್ ಮೈಕ್ರೋ ಕೊಡವ ರೇಸ್ ಹಾಗೂ ಎಸ್‌ಟಿ ಟ್ಯಾಗ್ ನೀಡಬೇಕು ಎಂಬ ಕಾನೂನುಬದ್ಧ ಬೇಡಿಕೆಗಳನ್ನು ಮುಂದಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.









