ಮಡಿಕೇರಿ ಜ.22 NEWS DESK : ಶತ ಶತಮಾನಗಳ ಹಿಂದೂ ಸಮಾಜದ ನಿರೀಕ್ಷೆಗಳು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರತಿಷ್ಠಾಪನೆಯ ಮೂಲಕ ಸಾಕಾರಗೊಳ್ಳುವ ಹಂತದಲ್ಲಿ, ಕೊಡಗು ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯೊಂದಿಗೆ ಶ್ರೀ ರಾಮ ನಾಮಸ್ಮರಣೆ ನಡೆಯಿತು.
ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಬಹುತೇಕ ದೇವಸ್ಥಾನಗಳಲ್ಲಿ ನೇರ ಪ್ರಸಾರದ ವೀಕ್ಷಣೆಗೆ ಅನುವಾಗುವಂತೆ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿತ್ತು, ಅತ್ಯಂತ ಭಕ್ತಿ ಭಾವದಿಂದ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡ ಹಿಂದೂ ಬಾಂಧವರು ಅಷ್ಟೇ ಕುತೂಹಲ ಆಸಕ್ತಿಗಳಿಂದ ಪ್ರಾಣ ಪ್ರತಿಷ್ಠಾಪನೆಯನ್ನು ವೀಕ್ಷಿಸಿ ಸಂಭ್ರಮಿಸಿದ್ದು ವಿಶೇಷ.
ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯ ದೇಗುಲದಲ್ಲಿ ಅಳವಡಿಸಲಾಗಿದ್ದ ಎಲ್‍ಇಡಿ ಪರದೆಯ ಮೂಲಕ ನೂರಾರು ಭಕ್ತರು ಪ್ರಾಣ ಪ್ರತಿಷ್ಠಾಪನೆಯನ್ನು ವೀಕ್ಷಿಸಿ, ಅದಾಗಲೆ ಹಿಂದೂ ಪರ ಸಂಘಟನೆಗಳಿಂದ ವಿತರಿಸಲಾಗಿದ್ದ ಅಯೋಧ್ಯೆ ಮಂತ್ರಾಕ್ಷತೆಯನ್ನು ಶಿರಕ್ಕೆ ಹಾಕಿಕೊಂಡು ಶ್ರೀರಾಮನಿಗೆ ನಮಿಸಿದರು.
ಸೋಮವಾರ ಬೆಳಗ್ಗಿನಿಂದಲೆ ಶ್ರೀ ಆಂಜನೇಯ ದೇಗುದಲ್ಲಿ ವಿಶೇಷ ಪೂಜೆಯೊಂದಿಗೆ ಶ್ರೀ ರಾಮ ತಾರಕ ಹೋಮ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು. ಇದೇ ಹಂತದಲ್ಲಿ ದೇಗುಲದ ಆವರಣದಲ್ಲಿ ಗಾಯಕ ರವಿ ಭೂತನಕಾಡು ನೇತೃತ್ವದ ತಂಡದಿಂದ ಶ್ರೀ ರಾಮನ ಭಜನಾ ಗೀತೆಗಳ ಗಾಯನ ಕಾರ್ಯಕ್ರಮ ಕೇಳುಗರ ಮನದಲ್ಲಿ ಭಕ್ತಿಭಾವದ ಸಂಚಾರವನ್ನುಂಟು ಮಾಡಿತು.
ಅಯೋಧ್ಯೆಯಲ್ಲಿ 1992 ರಲ್ಲಿ ನಡೆದ ಕರಸೇವೆಯಲ್ಲಿ ಪಾಲ್ಗೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆ.ಕೆ.ಮಹೇಶ್ ಕುಮಾರ್ ನೇತೃತ್ವದ ತಂಡದ ಸದಸ್ಯರುಗಳನ್ನು ಕೇಸರಿ ಶಾಲು ಹೊದೆಸಿ ಗೌರವಿಸಲಾಯಿತು. ಇದರೊಂದಿಗೆ ಅಂದಿನ ಕರಸೇವೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು, ಇಂದು ನಮ್ಮೊಡನೆ ಇಲ್ಲದ ಹಿರಿಯ ಕರಸೇವಕರನ್ನು ಸ್ಮರಿಸಿಕೊಂಡು ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಪ್ರಾಣ ಪ್ರತಿಷ್ಠಾ ಕಾರ್ಯ ಅಯೋಧ್ಯೆಯಲ್ಲಿ ಪೂರ್ಣಗೊಂಡ ಬಳಿಕ ಶ್ರೀ ಆಂಜನೇಯ ಸ್ವಾಮಿಗೆ ಮಹಾಪೂಜೆ, ಮಂಗಳಾರತಿ ನಡೆದು, ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
::: ಶ್ರೀ ಕೋದಂಡ ರಾಮನಿಗೆ ವಿಶೇಷ ಪೂಜೆ :::
ನಗರದ ಶ್ರೀ ಕೋದಂಡ ರಾಮ ದೇಗುಲದಲ್ಲಿ ಇಂದು ಬೆಳಗ್ಗಿನಿಂದಲೆ ಶ್ರೀ ರಾಮನಿಗೆ ವಿಶೇಷ ಪೂಜೆಯ ಜೊತೆಯಲ್ಲೆ, ಭಕ್ತಗಣದಿಂದ ಭಜನಾ ಕಾರ್ಯಕ್ರಮ ನಡೆಯಿತು.
ನಗರದ ಐತಿಹಾಸಿಕ ಹಿನ್ನೆಲೆಯ ಪೇಟೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ನಡೆಯುವುದರೊಂದಿಗೆ, ಸಂಜೆ ದೇವಸ್ಥಾನದ ಆವರಣದಲ್ಲಿ 1008 ದೀಪಗಳನ್ನು ಹಚ್ಚುವ ಮೂಲಕ ಮರ್ಯಾದ ಪುರುಷೋತ್ತಮ ರಾಮನನ್ನು ಆರಾಧಿಸಲಾಯಿತು. ಶ್ರೀಚೌಡೇಶ್ವರಿ ದೇವಾಲಯದಲ್ಲಿ ಕೂಡ ವಿಶೇಷ ಪೂಜೆ ಪ್ರಾರ್ಥನೆಯೊಂದಿಗೆ ಅನ್ನಸಂತರ್ಪಣೆಯೂ ನಡೆಯಿತು.
::: ಅನ್ನದಾನ :::
ನಗರದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ವಿವಿಧ ಹಿಂದೂ ಪರ ಸಂಘಟನೆಗಳು ಒಗ್ಗೂಡಿ ಸಾರ್ವಜನಿಕ ಅನ್ನದಾನ ನಡೆಸುವ ಮೂಲಕ ಗಮನ ಸೆಳೆದವು.