ಚೆಟ್ಟಳ್ಳಿ ಜ.23 NEWS DESK : ಚೆಟ್ಟಳ್ಳಿ ಪ್ರೌಢಶಾಲೆಯ ಕ್ರೀಡೋತ್ಸವವು ಸಂಭ್ರಮದಿಂದ ನಡೆಯಿತು.
ಶಾಲಾ ಮೈದಾನದಲ್ಲಿ ಧ್ವಜರೋಹಣ ನೆರವೇರಿಸಿ ಮಾತನಾಡಿದ ಮಾದೇಟಿರ ಪಿ.ತಿಮ್ಮಯ್ಯ ತನ್ನ ವಿದ್ಯಾರ್ಥಿಜೀವನದ ನೆನಪನ್ನು ಮೆಲುಕು ಹಾಕಿದರು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರುವುದರ ಮೂಲಕ ಉತ್ತಮ ಹವ್ಯಾಸವನ್ನು ವೃದ್ಧಿಸಿಕೊಳ್ಳುವ ಮೂಲಕ ಜೀವನದಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಹೆಚ್.ಕೆ.ಬೋಜ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಕ್ರೀಡಾಕೂಟ ಸಹಕಾರಿ ಎಂದ ಅವರು, ಕ್ರೀಡೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು, ಸಂಯಮ ಹಾಗೂ ಪರಸ್ಪರ ಸಹಕಾರ ಸಹಬಾಳ್ವೆಯನ್ನು ಹೆಚ್ಚಿಸಲಿದೆ ಎಂದರು.
ಶಾಲಾ ಆಡಳಿತ ಮಂಡಳಿಯ ಸಂಚಾಲಕ ಮುಳ್ಳಂಡ ರತ್ತುಚಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತ ಆಟಪಾಠಗಳಲ್ಲಿ ತೊಡಗಿಸಿ ಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪೇರಿಯನ ಪಿ.ಜಯಾನಂದ ಆರೋಗ್ಯವಂತ ಸದೃಢ ಯುವ ಜನಾಂಗ ನಿರ್ಮಾಣವಾಗಬೇಕಾದರೆ ಕ್ರೀಡೆ ಹಾಗೂ ಯೋಗದಲ್ಲಿ ತೊಡಗಿಸಿ ಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉದ್ಯಮಿ ಮಾದೇಟಿರ ಪಿ.ತಿಮ್ಮಯ್ಯ ಹಾಗೂ ನಿವೃತ್ತ ಮುಖ್ಯೋಪದ್ಯಾಯರಾದ ಹೆಚ್.ಕೆ.ಬೋಜ ಪಾಲ್ಗೊಂಡಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಮುಖ್ಯೋಪದ್ಯಾಯರಾದ ಕೆ. ತಿಲಕ ಸ್ವಾಗತಿಸಿದರು. ಗಣಿತ ಶಿಕ್ಷಕ ಜಿ.ಸಿ.ಸತ್ಯನಾರಾಯಣ ವಂದಿಸಿದರು. ಕನ್ನಡ ಶಿಕ್ಷಕಿ ಯು.ಸುನಂದ ನಿರೂಪಿಸಿದರು. ಕ್ರೀಡೋತ್ಸವ ವನ್ನು ಶಾಲಾ ದೈಹಿಕಶಿಕ್ಷಕಿ ಗೀತಾ ಅಯ್ಯಪ್ಪ ನಡೆಸಿಕೊಟ್ಟರು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಂದ ವ್ಯಾಯಾಮ, ಯೋಗಾಸನ ಪ್ರದರ್ಶನ, ಬಾಲಕ ಬಾಲಕಿಯರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಕ್ರೀಡೆ ಗಳು ನಡೆದವು. ಚೆಟ್ಟಳ್ಳಿ ಸ್ಫೋಟ್ಸ್ ಕ್ಲಬ್ ವತಿಯಿಂದ ಸಾರ್ವಜನಿಕರಿಗೆ ನಿಧಾನಗತಿಯ ಮೋಟಾರ್ ಬೈಕ್ ಸ್ಪರ್ಧೆ, ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಹೆಚ್ಚಿನ ಅಂಕಪಡೆದ ವಿದ್ಯಾರ್ಥಿ ಗಳಿಗೆ ದತ್ತಿನಿಧಿ ಹಾಗೂ ಕೀಡೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.