ಮಡಿಕೇರಿ ಜ.23 NEWS DESK : ಮಡಿಕೇರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ನಿತ್ಯ ಜನಜಂಗುಳಿ ಏರ್ಪಡುತ್ತಿದ್ದು, ಹೆಸರು ನೋಂದಾವಣಿ ಮತ್ತು ಶುಲ್ಕ ಪಾವತಿ ಸ್ಥಳದಲ್ಲಿ ಹೆಚ್ಚುವರಿ ಕೌಂಟರ್ ತೆರೆಯಬೇಕೆಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಸಂಘಟನೆಯ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಹೆಚ್.ಎಂ.ಸೋಮಪ್ಪ ಒತ್ತಾಯಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ನೂರಾರು ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಇವರಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಸ್ಪತ್ರೆಯಲ್ಲಿ ಮಾಹಿತಿಯ ಕೊರತೆ ಎದುರಾಗಿದೆ ಎಂದರು.
ಹೆಸರು ನೋಂದಾವಣಿ ಮತ್ತು ಶುಲ್ಕ ಪಾವತಿಗೆ ತಲಾ ಒಂದೊಂದು ಕೌಂಟರ್ ಮಾತ್ರ ಇದೆ. ಈ ಕೌಂಟರ್ ಗಳ ಎದುರು ಸಾಲು ಸಾಲು ಜನ ನಿಂತಿರುತ್ತಾರೆ. ಮಧ್ಯಾಹ್ನವಾದರೂ ಚೀಟಿ ಸಿಗದೆ ರೋಗಿಗಳು ಹಾಗೂ ಸಂಬಂಧಿಕರು ಬೇಸತ್ತು ಮರಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಶುಲ್ಕ ಪಾವತಿಯ ಬಗ್ಗೆ ಯಾರೂ ಸರಿಯಾದ ಮಾಹಿತಿಯನ್ನು ಒದಗಿಸುತ್ತಿಲ್ಲ. ಕೌಂಟರ್ ನ್ನು ಹುಡುಕಿಕೊಂಡು ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಅರಿವಿದ್ದರೂ ಹೆಚ್ಚುವರಿ ಕೌಂಟರ್ ತೆರೆಯುವ ಮತ್ತು ಬಡ ರೋಗಿಗಳಿಗೆ ಸೂಕ್ತ ಮಾಹಿತಿ ಒದಗಿಸುವ ಕಾರ್ಯ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ದಿನದಿಂದ ದಿನಕ್ಕೆ ಜಿಲ್ಲಾಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆಯ ಮೇಲೆ ವಿಶ್ವಾಸವಿಟ್ಟು ಬರುತ್ತಿರುವ ರೋಗಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುತ್ತಿಲ್ಲ. ಕೆಲವು ಆರೋಗ್ಯ ಸೇವೆಗಳು ಇಲ್ಲಿ ಲಭ್ಯವಿಲ್ಲ ಮತ್ತು ಹೆಚ್ಚುವರಿ ವೈದ್ಯರ ಅಗತ್ಯವೂ ಇದೆ. ಜಿಲ್ಲಾಸ್ಪತ್ರೆಯ ಸಮಸ್ಯೆಗಳ ಬಗ್ಗೆ ಶಾಸಕದ್ವಯರು ಖುದ್ದು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಬಡವರಿಗಾಗಿ ಇರುವ ಸರ್ಕಾರಿ ಆಸ್ಪತ್ರೆಯನ್ನು ನಿರ್ಲಕ್ಷಿಸಬಾರದು ಎಂದು ಸೋಮಪ್ಪ ಒತ್ತಾಯಿಸಿದ್ದಾರೆ.









