ನಾಪೋಕ್ಲು ಜ.23 NEWS DESK : ಕ್ರೀಡಾಕೂಟದ ಆಯೋಜನೆಯಿಂದ ಜನಾಂಗಬಾಂಧವರ ನಡುವೆ ಬಾಂಧವ್ಯ ವೃದ್ಧಿಸಲು ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕುಂಜಿಲ ಗ್ರಾಮದ ನಾಲ್ನಾಡು ಶಿವಾಜಿ ಯೂತ್ಸ್ ವತಿಯಿಂದ ನಡೆದ ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾವಳಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿವಿಧ ಕ್ರೀಡಾಕೂಟಗಳಲ್ಲಿ ಗೆಲುವು ಸಾಧಿಸಿದವರು ಸಂಭ್ರಮಿಸಿದರೆ ಸೋತವರು ನಿರಾಶರಾಗುವ ಅಗತ್ಯವಿಲ್ಲ. ಇಂತಹ ಕ್ರೀಡಾಕೂಟಗಳಿಂದ ಸೌಹಾರ್ಧದ ವಾತಾವರಣ ಮೂಡುತ್ತದೆ. ಕುಟುಂಬಗಳ ನಡುವೆ ಮೂಡುವಂತೆ ಸಮಾಜದಲ್ಲೂ ಸೌಹಾರ್ಧದ ವಾತಾವರಣ ಏರ್ಪಡುವಂತಾಗಲಿ ಎಂದರು.
ಸಮಾರಂಭದಲ್ಲಿ ಶಾಸಕ ಎಸ್. ಪೊನ್ನಣ್ಣ ಹಾಗೂ ಜನಪದ ತಜ್ಞ ಉತ್ತುಕುಟ್ಟಡ ತಿಮ್ಮಯ್ಯ (ಉಪ್ಪಚ್ಚ) ವಾಲಗ ತಜ್ಞ ಕೊಟ್ಟ ಕುಟ್ಟಂಡ ಶಂಭು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಾಲ್ನಾಡು ಶಿವಾಜಿ ಯೂತ್ ಕ್ಲಬ್ ಅಧ್ಯಕ್ಷ ಉತ್ತುಕುಟ್ಟಡ ನಿತಿನ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ, ಪ್ರಮುಖರಾದ ಬಾಚಮಂಡ ರಾಜಾ ಪೂವಣ್ಣ, ಹೈಕೋರ್ಟ್ ವಕೀಲ ಮೂಕುಟ್ಟಡ ಬೋಪಣ್ನ, ಕೊಡಗು ಕೆಂಬಟ್ಟಿ ಸಮಾಜದ ಪ್ರಧಾನ ಕಾರ್ಯದರ್ಶಿ ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಕುಂಜಿಲ-ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ, ಚಪ್ಪಂಡಡಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹೇಮಾವತಿ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಕಕ್ಕಬೆ ಕುಂಜಿಲ ಗ್ರಾ.ಪಂ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಹಾಗೂ ಶಿವಾಜಿ ಯೂತ್ಸ್ ಪದಾಧಿಕಾರಿಗಳು ಸದಸ್ಯರು ಸಾರ್ವಜನಿಕರು ಹಾಜರಿದ್ದರು. ದಿನೇಶ್ ಪೆಗ್ಗುಳಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಕ್ರೀಡಾಕೂಟದ ವಿಜೇತರು : ಜನಾಂಗ ಬಾಂಧವರ ನಡುವೆ ನಡೆದ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅರಮೇರಿಯ ಎವೈಸಿಸಿ ತಂಡ ಗೆಲುವು ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಪುತ್ತುಮಾಡ್ ಎ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಪುತ್ತುಮಾಡ್ ಬಿ ತಂಡ ತೃತೀಯ ಸ್ಥಾನ ಪಡೆಯಿತು. ಪಂದ್ಯ ಶ್ರೇಷ್ಠ ಪ್ರಶಸ್ತಿ ಪ್ರಮೋದ್ ಜೋಡುಬೀಟಿ. ಪಂದ್ಯ ಪುರುಷೋತ್ತಮ ದಿಲನ್ ಅರಮೆರಿ ಭಾಜನರಾದರು.
ಮಹಿಳೆಯರ ಹಗ್ಗ ಜಗ್ಗಾಟ್ಟ ಸ್ಪರ್ಧೆಯಲ್ಲಿ ಕೋತೂರು ತಂಡ ಗೆಲುವು ಸಾಧಿಸಿದರೆ, ಪೆರ್ನಾಡ್ ತಂಡ ಕರ್ನಾಟಕ ರನ್ನರ್ ಅಪ್ ಸ್ಥಾನ ಪಡೆಯಿತು.
ವರದಿ : ದುಗ್ಗಳ ಸದಾನಂದ