ಮಡಿಕೇರಿ ಜ.23 NEWS DESK : ಶ್ರೀರಾಮನ ಪ್ರಾಣ ಪ್ರತಿಷ್ಠೆ ಅಂಗವಾಗಿ ವಿರಾಜಪೇಟೆ ಪಟ್ಟಣದಲ್ಲಿ ಅಳವಡಿಸಿದ್ದ ಕೇಸರಿ ತೋರಣ ಮತ್ತು ಫ್ಲೆಕ್ಸ್ಗಳನ್ನು ತೆರವು ಮಾಡುವಂತೆ ಪುರಸಭೆಯ ಮುಖ್ಯಾಧಿಕಾರಿಗಳು ನೋಟೀಸು ನೀಡಿದ್ದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಮಂಗಳವಾರ ಪುರಸಭೆ ಕಛೇರಿ ಎದುರು ಪ್ರತಿಭಟನೆ ನಡೆಸಿದವು.
ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪುರಸಭೆ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನೋಟೀಸ್ ವಾಪಾಸ್ಸು ಪಡೆಯುವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ವಿರಾಜಪೇಟೆಯ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ತೋರಣ ತೆರವು ಮಾಡುವಂತೆ ನೋಟೀಸ್ ನೀಡಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷದ ನಾಯಕರ ಬೃಹತ್ ಕಟ್ ಔಟ್ ಅಳವಡಿಸಿದಲ್ಲಿ ಯಾವುದೇ ತೊಂದರೆ ಇಲ್ಲ, ಶ್ರೀರಾಮಚಂದ್ರನ ಚಿತ್ರ ಮತ್ತು ಕೇಸರಿ ಕಂಡಲ್ಲಿ ತೆರುವು ಮಾಡುವಂತೆ ಹೇಳುವುದು ರಾಜಕೀಯ ಕುತಂತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಟನೆಯಲ್ಲಿ ಜಿ.ಪಂ ಮಾಜಿ ಸದಸ್ಯರಾದ ಶಶಿ ಸುಬ್ರಮಣಿ, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ.ಎಂ.ಕುಮಾರ್, ಭಜರಂಗದಳದ ಜಿಲ್ಲಾ ಪ್ರಮುಖ್ ವಿವೇಕ್ ರೈ, ಭಾ.ಜ.ಪ ಪ್ರಮುಖರಾದ ವಾಟೇರಿರ ಬೋಪಣ್ಣ, ಟಿ.ಪಿ.ಕೃಷ್ಣ, ಹಿಂದೂ ಪರ ಸಂಘಟನೆಗಳ ಪ್ರಮುಖರು ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.











