ವಿರಾಜಪೇಟೆ ಜ.24 NEWS DESK : ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ವಿರಾಜಪೇಟೆಯ ವಿವಿಧ ದೇವಾಲಯಗಳಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.
ಬೆಳಿಗ್ಗೆಯಿಂದಲೇ ನಗರದ ವಿವಿಧ ದೇವಾಲಯಗಳಲ್ಲಿ ರಾಮಜಪ, ಭಜನೆ ಸೇರಿದಂತೆ ವಿಶೇಷ ಪೂಜೆ ನೆರವೇರಿತು.
ವೀರಾಜಪೇಟೆಯ ಪ್ರಮುಖ ದೇವಾಲಯಗಳಲ್ಲೊಂದಾದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನೆರೆದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು.
ಸಾವಿರಾರು ಭಕ್ತರು ಮುಂಜಾನೆಯಿಂದಲೇ ದೇವಾಲಯಕ್ಕೆ ಆಗಮಿಸಿ, ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು. ರಾಮ ಪ್ರತಿಷ್ಠಾಪನೆ ಪ್ರಯುಕ್ತ ದೇವಾಲಯವನ್ನು ಹೂವುಗಳಿಂದ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಗಣಪತಿ ದೇವಾಲಯದಲ್ಲಿಹಿಂದೂಪರ ಸಂಘಟನೆಗಳಿಂದ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಮಾಡಲಾಯಿತು.
ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಬಾಲಂಜನೆಯ ದೇವಾಲಯದಲ್ಲಿ ಬೆಳಿಗ್ಗೆಯಿಂದಲೆ ವಿಶೇಷ ಪೂಜೆ, ಪುನಸ್ಕಾರ, ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ರಾತ್ರಿ ವಿಶೇಷ ಪೂಜೆ ನಡೆದ ಬಳಿಕ ಅನ್ನ ಸಂತರ್ಪಣೆ ಮಾಡಲಾಯಿತು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಆಂಜನೇಯ ದೇವಾಲಯ ಚಿಕ್ಕಪೇಟೆ, ಕಾವೇರಿ ಗಣೇಶೊತ್ಸವ ಸಮಿತಿ ಮೂರ್ನಾಡು ರಸ್ತೆ, ಅಂಗಾಳ ಪರಮೇಶ್ವರಿ ದೇವಾಲಯ, ದಕ್ಷಿಣಾ ಮಾರಿಯಮ್ಮ ದೇವಾಲಯ ತೆಲುಗರ ಬೀದಿ, ವಿಷ್ಣುಮೂರ್ತಿ ದುರ್ಗಿ ದೇವಾಲಯ, ಗೌರಿಕೆರೆ, ಮುತ್ತಪ್ಪ ದೇವಾಲಯ, ಕೆದಮುಳ್ಳುರು ಮಹಾದೇವರ ದೇವಾಲಯ, ಭಗವತಿ ದೇವಸ್ಥಾನ, ಕೊಟ್ಟೋಳಿ ಧಾರಾಮಹೇಶ್ವರ, ದೇವಾಲಯ, ತೋರ ಗ್ರಾಮದ ತೋಮರತಪ್ಪ ದೇವಸ್ಥಾನ, ಪೆರುಂಬಾಡಿಯ ಅಯ್ಯಪ್ಪ ದೇವಸ್ಥಾನ, ಬೇಟೋಳಿ ಪುದುಪಾಡಿ ಅಯ್ಯಪ್ಪ ದೇವಸ್ಥಾನ, ಅಮ್ಮತ್ತಿ ಪುಲಿಯೇರಿ ದೇವಸ್ಥಾನ, ಅಮ್ಮತ್ತಿ ನಗರ ಸೇರಿದಂತೆ ತಾಲೂಕಿನಾದ್ಯಂತ ವಿವಿಧೆಡೆ ವಿಶೇಷ ಪೂಜೆ ನಡೆದು ಬಳಿಕ ಪ್ರಸಾದ ವಿತರಣೆ ಮಾಡಲಾಯಿತು.
ನಗರದ ಕಾರು ನಿಲ್ದಾಣದದಲ್ಲಿ ಹಿಂದೂಪರ ಸಂಘಟನೆಗಳ ವತಿಯಿಂದ ಅಯೋದ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಎಲ್ ಇ ಡಿ ಪರದೆ ಮೂಲಕ ನೇರ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವರಕಾಡು ರಸ್ತೆಯಲ್ಲಿರುವ ಮಹಾವಿಷ್ಣು ದೇವಾಲಯದಲ್ಲಿ ವಿಶೇಷ ಪೂಜೆ:
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಂದರ್ಭದಲ್ಲಿ ಶ್ರೀ ಕಾವೇರಿ ಆಶ್ರಮ ಪ್ರಕಾಶ್ ಕುಠೀರದ ಮಹಾವಿಷ್ಣು ದೇವಾಲಯದಲ್ಲಿ ಶ್ರೀ ರಾಮ ನಾಮ ತಾರಕ ಯಜ್ನ ನೆರವೇರಿತು.
ಪ್ರಸಿದ್ಧ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಪ್ರಮೋದ್ ಭಟ್ ನೇತೃತ್ವದಲ್ಲಿ ಸುಮಾರು 8 ಮಂದಿ ಅರ್ಚಕ ವೃಂದದವರು ಸೇರಿ ಯಜ್ಞ ಕಾರ್ಯ ನೆರವೇರಿಸಿದರು.
ಇದೇ ಸಂದರ್ಭ ಬೇಟೋಳಿ ಪುದುಪಾಡಿ ಅಯ್ಯಪ್ಪ ದೇವಸ್ಥಾನದಲ್ಲಿ ನೂತನವಾಗಿ ಆರಂಭವಾದ ಮಹಿಳಾ ಚಂಡೆಮೇಳ ರುದ್ರಂ ತಂಡ ಚಂಡೆವಾದ್ಯ ನಡೆಸಿಕೊಟ್ಟರು. ಸ್ವರಾರ್ಣಾವ ಸಂಗೀತ ಶಾಲೆಯ ವಿದ್ವಾನ್ ದಿಲಿಕುಮಾರ್ ಹಾಗೂ ಮಹಿಳಾ ಭಜನಾ ತಂಡದವರು ದೇವರ ನಾಮ ಸ್ಥುತಿಸಿದರು.
ಯಜ್ಞ ಹಾಗೂ ವಿಶೇಷ ಮಹಾಪೂಜೆ ನಡೆದ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯ ನಡೆಯಿತು.
ಇದೇ ಮೊದಲ ಬಾರಿಗೆ ನಡೆದ ಶ್ರೀರಾಮ ನಾಮ ತಾರಕ ಯಜ್ಞಕ್ಕೆ ತಾಲೂಕಿನ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ವಿಶಾಲ ಪರದೆ ಅಳವಡಿಸಿ ಯಜ್ಞ ಕಾರ್ಯ ವೀಕ್ಷಿಸಲು ಅನುವು ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಕಾವೇರಿ ಆಶ್ರಮ, ಶ್ರೀ ಮಹಾವಿಷ್ಣು ದೇವಾಲಯದ ಅಧ್ಯಕ್ಷರು, ಶತಾಯುಷಿಗಳಾದ ಶ್ರೀ, ಶ್ರೀ, ಶ್ರೀ, ವಿವೇಕಾನಂದ ಶರಣ ಸ್ವಾಮಿಗಳು, ಶ್ರೀ ಆತ್ಮನಂದಾಪುರಿ ಸ್ವಾಮಿಜಿ ಸೇರಿದಂತೆ ಆಶ್ರಮದ ಭಕ್ತರು ಹಾಜರಿದ್ದರು.
ಹಿಂದೂಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಭರ್ಜರಿ ವ್ಯಾಪಾರ: ಮಾರುಕಟ್ಟೆಗಳಲ್ಲಿ ರಾಮನ ಚಿತ್ರವುಳ್ಳ ಕೇಸರಿ ಧ್ವಜ, ಮಾಲೆ, ಖರೀದಿ ಜೋರಾಗಿತ್ತು. ಹೂ-ಹಣ್ಣುಗಳ ಖರೀದಿ ಭರಾಟೆಯೂ ನಡೆಯಿತು.
ಹಣತೆ ಖರೀದಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಭಕ್ತರು ಮನೆಗಳಲ್ಲಿ ದೀಪ ಹಚ್ಚಲು ಕರೆ ನೀಡಿರುವ ಕಾರಣ ತಮ್ಮ ಮನೆ ಮನೆಗಳಲ್ಲಿ ಸಂಜೆ ದೀಪ ಬೆಳಗಲು ದೀಪಗಳ ಖರೀದಿ ನಡೆಯಿತು.