ಕಡಂಗ ಜ.24 NEWS DESK : ಕಡಂಗ ಪ್ರಿಮೀಯರ್ ಫುಟ್ಬಾಲ್ ಆರನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಬರ್ಗೂರು ಎಫ್ ಸಿ ತಂಡ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಕಡಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಪಾಲ್ಗೊಂಡು ಅತ್ಯಂತ ರೋಚಕವಾದ ಫೈನಲ್ ಪಂದ್ಯದಲ್ಲಿ ಸೆವೆನ್ ಶೂಟರ್ ತಂಡವನ್ನು ಮಣಿಸಿ ಬರ್ಗೂರು ಎಫ್ ಸಿ ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಕ್ರೀಡಾಕೂಟದ ಉತ್ತಮ ಆಟಗಾರ ಪ್ರಶಸ್ತಿಯನ್ನು ಸಫಾದ್ ಪಡೆದುಕೊಂಡರು. ಉತ್ತಮ ಗೋಲ್ಕೀಪರ್ ಪ್ರಶಸ್ತಿ ಅಫ್ಸಲ್ ಪಡೆದುಕೊಂಡರು.
ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಅನಸ್ ಭಾಜನರಾದರು. ಕ್ರೀಡಾಕೂಟದ ಉತ್ತಮ ಡಿಫೆಂಡರ್ ಆಗಿ ಅಸೀಕ್, ಹೆಚ್ಚು ಗೋಲು ಬಾರಿಸಿದ ಆಟಗಾರ ನಾಫಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.
ತೀರ್ಪುಗಾರರಾಗಿ ರಾಜ್ಯಮಟ್ಟದ ತೀರ್ಪುಗಾರ ಶೇಷಪ್ಪ ಅಮ್ಮತ್ತಿ ಕಾರ್ಯನಿರ್ವಹಿಸಿದರು.
ಉದ್ಘಾಟನೆ :: ನಿವೃತ್ತ ಶಿಕ್ಷಕರಾದ ಕುಲ್ಲಚೆಂಡ ಟೈನಿ ಈರಪ್ಪ ಪಂದ್ಯಾವಳಿಗೆ ಚಾಲನೆ ನೀಡಿ ಶುಭ ಹಾರೈಸಿದರು.
ಅತಿಥಿಗಳಾದ ಅರಫ ಅಬ್ದುಲ್ ರಹಮಾನ್ ಮಾತನಾಡಿ, ಕ್ರೀಡೆಯಿಂದ ಯುವ ಪ್ರತಿಭೆಗಳನ್ನು ಹೊರ ತರಲು ಸಹಕಾರಿಯಾಗುತ್ತದೆ ಮತ್ತು ಕ್ರೀಡೆಯ ಯಶಸ್ಸಿಗೆ ಎಲ್ಲರೂ ಸಹಕಾರ ನಿಡಬೇಕಾಗಿದೆ ಎಂದು ನುಡಿದರು.
ಗ್ರಾ.ಪಂ ಸದಸ್ಯ ಸಿ.ಇ.ಸುಬೀರ್ ಮಾತನಾಡಿ, ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಸಮಾರಂಭ ಅಧ್ಯಕ್ಷತೆಯನ್ನು ಕೆಪಿಎಲ್ ಸಂಸ್ಥಾಪಕ ಲತಿಫ್ ವಹಿಸಿದ್ದರು.
ಸಮಾರೋಪ ಸಮಾರಂಭ :: ಸಮಾರಂಭದಲ್ಲಿ ಎಸ್ ಎಮ್ ಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಬಲ್ಲಚಂಡ ಕುಸುಮ ಟಿಟ್ಟೋ ಮಾತನಾಡಿ, ಕ್ರೀಡೆಯಲ್ಲಿ ಯಶಸ್ಸು ಕಾಣಲು ಶಿಸ್ತು ಬಹಳ ಮುಖ್ಯವಾಗಿದ್ದು, ಅದೇ ರೀತಿ ತಮ್ಮ ಜೀವನದಲ್ಲಿ ಶಿಸ್ತುವಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಜೀವನದ ಯಶಸ್ವಿಗೆ ಪ್ರತಿಯೊಬ್ಬ ಆಟಗಾರರು ಕಾರಣಕರ್ತರಾಗಬೇಕು. ಕ್ರೀಡೆಯೊಂದಿಗೆ ವಿದ್ಯಾಭ್ಯಾಸದಲ್ಲೂ ಯಶಸ್ವಿ ಕಾಣಬೇಕು ಎಂದು ನುಡಿದರು.
ಅತಿಥಿಗಳಾಗಿ ಕಿರಣ್ , ಸಿ ಆರ್ ಜಿ ಗ್ರೂಪ್ ಮಾಲೀಕ ರಫೀಕ್ ಅರಫಾ, ಸಭಾದ್ ಕಡಂಗ, ನೌಶಾದ್, ಜಾಯ್ ಕಾವೇರಪ್ಪ , ಸಿ.ಎಂ.ಜುನೈದ್, ಸಿ.ಎ.ರಜಾಕ್, ಕೆ.ಎಂ.ಜುನೈದ್ ,ಮೂಯ್ದು, ಅಬೂಬಕ್ಕರ್, ನಾಸರ್, ಅನ್ಸಾರ್ ದುಬೈ ಹಾಗೂ ಆಯೋಜಕರಾದ ಅಜ್ಮಲ್, ಸಾಕಿರ್, ಉನೈಸ್, ಚಾಚುಸ್ ಹಾಜರಿದ್ದರು.
ಪತ್ರಕರ್ತ ಎಂ.ಬಿ.ನೌಫಲ್ ಸ್ವಾಗತಿಸಿದರು. ರಮೀಜ್ ಫ್ರೀಡಂ ವಂದಿಸಿದರು.
ವರದಿ : ಎಂ.ಬಿ.ನೌಫಲ್ ಕಡಂಗ