ಮಡಿಕೇರಿ ಜ.24 NEWS DESK : ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳನ್ನು ಪ್ರತಿರೋಧಿಸಿ, ದುಡಿಯುವ ಜನಸಮುದಾಯದ ಸಮಸ್ಯೆಗಳನ್ನು ಪರಿಹರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಫೆ.1 ರಂದು ಬೆಂಗಳೂರಿನಲ್ಲಿ ಬಜೆಟ್ ಪೂರ್ವ ಜನಾಗ್ರಹ ಬೃಹತ್ ಪ್ರತಿಭಟನೆ ಮತ್ತು ಬಹಿರಂಗ ಅಧಿವೇಶನ ನಡೆಯಲಿದೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‍ನ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಹೆಚ್.ಎಂ.ಸೋಮಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಕಾರ್ಮಿಕರ ಕನಿಷ್ಠ ವೇತನ, ಗೌರವಧನದ ಹೆಚ್ಚಳಕ್ಕಾಗಿ ಬಿಸಿಯೂಟ, ಅಂಗನವಾಡಿ, ಆಶಾ, ಕೈಗಾರಿಕಾ, ಕಟ್ಟಡ, ಸಾರಿಗೆ, ಬೀಡಿ, ಪ್ಲಾಂಟೇಷನ್, ಬ್ಯಾಂಕ್-ವಿಮಾ, ಗಿಗ್, ಗಣಿಕಾರ್ಮಿರಿಂದ ಪ್ರತಿಭಟನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಪ್ರಿಯಾಂಕ ಗಾಂಧಿಯವರು ಘೋಷಿಸಿದ್ದ 6ನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ ರೂ.10 ಸಾವಿರ, ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಗೆ ರೂ.10 ಸಾವಿರ ಮತ್ತು ಆಶಾ ಕಾರ್ಯಕರ್ತೆಯರಿಗೆ ರೂ.10 ಸಾವಿರ ಗೌರವ ಧನ ಹೆಚ್ಚಿಸುವುದರ ಜೊತೆಗೆ ಎಲ್ಲಾ ಯೋಜನೆಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಯಕರ್ತೆಯರಿಗೆ ನಿವೃತ್ತಿ ವೇತನ ಇಡುಗಂಟು, ಇಎಸ್‍ಐ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.
ಕಾರ್ಮಿಕರ ಕಾನೂನುಗಳ ಜಾರಿಯನ್ನು ರದ್ದು ಮಾಡಿ ಹಿಂಪಡೆಯಬೇಕು ಮತ್ತು ಕನಿಷ್ಠ ವೇತನದ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕು. ಪ್ಲಾಂಟೇಶನ್ ಕಾರ್ಮಿಕರಿಗೆ ಸಮರ್ಪಕ ವೇತನ, ವಸತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಹಣದ ದುರುಪಯೋಗ ತಡೆದು, ನೈಜ ಕಾರ್ಮಿಕರ ಕುಟುಂಬಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕು. ಬೀಡಿ ಕಾರ್ಮಿಕರ ತುಟ್ಟಿ ಭತ್ಯೆ, ಕನಿಷ್ಠ ವೇತನ ಹಾಗೂ ಅಭಿವೃದ್ಧಿ ನಿಗಮ ಸ್ಥಾಪಿಸಲು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದೆಂದು ಹೇಳಿದರು.
ಗಿಗ್ ವರ್ಕರ್ಸ್‍ಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ನೀಡಬೇಕು. ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು. ಗಣಿ ಕಾರ್ಮಿಕರಿಗೆ ಸಮಾನ ವೇತನ ನೀಡಿ, ಸರ್ಕಾರಿ ಒಡೆತನ ಹೊಂದಿರುವ ಹಟ್ಟಿ ಚಿನ್ನದ ಕಂಪನಿಯ ಮೂಲಕ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಲು ಮತ್ತು ಕೇಂದ್ರ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಲು ಪ್ರಬಲ ಜನಾಂದೋಲನ ರೂಪಿಸಲು ಕನಿಷ್ಠ ವೇತನ ಕುರಿತಂತೆ ಬೆಲೆಗಳ ವೈಜ್ಞಾನಿಕ ಅಧ್ಯಯನವನ್ನು ರಾಜ್ಯ ಉಚ್ಚ ನ್ಯಾಯಾಲಯ 31,500 ರೂ ಪ್ರತಿಯೊಂದು ಕುಟುಂಬ ನಿರ್ವಹಣೆಗೆ ಅಗತ್ಯವಾಗಿದೆ ಎಂದು ಹೇಳಿದೆ.
ಈ ಆದೇಶದನ್ವಯ ರಾಜ್ಯದ 1.7 ಕೋಟಿ ಕಾರ್ಮಿಕರು ಇದರ ಪ್ರಯೋಜನ ಪಡೆಯುವ ಅರ್ಹತೆ ಹೊಂದಿದ್ದು, ಇದನ್ನು ಜಾರಿಗೊಳಿಸುವಂತೆ ಪ್ರತಿಭಟನೆಯಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದೆಂದು ಸೋಮಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಕೆ.ವಿ.ಸುನಿಲ್, ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಪಿ.ಟಿ.ಸುಂದರ, ಸದಸ್ಯರಾದ ಶಭಾನ ಹಾಗೂ ರಮೇಶ್ ಮಾಯಮುಡಿ ಉಪಸ್ಥಿತರಿದ್ದರು.









