ಮಡಿಕೇರಿ ಜ.26 : ಕೊಡಗು ಜಿಲ್ಲಾಡಳಿತದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಧ್ವಜಾರೋಹಣ ನೆರವೇರಿಸಿ, ಪಥಸಂಚಲನ ವೀಕ್ಷಿಸಿ ಗೌರವ ವಂದನೆಯನ್ನು ಸ್ವೀಕರಿಸಿದರು.
ನಂತರ ಸಂದೇಶ ನೀಡಿದ ಸಚಿವರು ಮಹಾತ್ಮ ಗಾಂಧೀಜಿಯವರ ರಾಮರಾಜ್ಯ, ಡಾ.ಬಿ.ಆರ್.ಅಂಬೇಡ್ಕರ್ ಅವರ ಕಲ್ಯಾಣ ರಾಜ್ಯದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮುನ್ನಡೆಸಲು ನುಡಿದಂತೆ ನಡೆಯಲಾಗುತ್ತಿದೆ ಎಂದರು.
ಸಂವಿಧಾನಕ್ಕೆ ಬದ್ಧವಾಗಿ ಬದುಕುವ ಮನೋಭೂಮಿಕೆ ಇಂದಿನ ತುರ್ತು ಅನಿವಾರ್ಯತೆಯಾಗಿದೆ. ಆಗ ಮಾತ್ರವೇ ಸಂವಿಧಾನದ ಅತೀ ಶ್ರೇಷ್ಠ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳಿಗೆ ನಿಜವಾದ ಅರ್ಥ ಬರುವುದು.
ಭಾರತದ 75 ನೇ ಗಣರಾಜ್ಯೋತ್ಸವ ಸಮಾರಂಭವನ್ನು ನಾವೆಲ್ಲರೂ ಅಚರಿಸುತ್ತಿದ್ದೇವೆ. 1950 ರ ಜನವರಿ 26 ರಂದು ನಾವು ಮೊದಲ ಬಾರಿಗೆ ನಮ್ಮದೇ ಸಂವಿಧಾನವನ್ನು ಹೊಂದಿ ಭಾರತವೊಂದು ಸಾರ್ವಭೌಮ ಗಣರಾಜ್ಯವಾಗಿ ಹೊರಹೊಮ್ಮಿತು. ಏಕೆಂದರೆ 1950 ಕ್ಕಿಂತ ಹಿಂದೆ ನಮ್ಮ ದೇಶದ ಆಡಳಿತವೆಲ್ಲವೂ ಬ್ರಿಟೀಷರು ರೂಪಿಸಿದ 1935 ರ ಭಾರತ ಸರ್ಕಾರದ ಕಾಯ್ದೆಯ ಪ್ರಕಾರ ನಡೆಯುತ್ತಿತ್ತು. ಸ್ವಾತಂತ್ರ್ಯನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಮಂಡಳಿಯ ದೀರ್ಘ ಅಧ್ಯಯನ ಚಿಂತನ ಮಂಥನಗಳ ಫಲವಾಗಿ ನಮ್ಮ ಸಂವಿಧಾನ ರೂಪುಗೊಂಡಿತು.
ಭಾರತದಂತಹ ಬಹುಭಾಷೆ, ಬಹುಧರ್ಮ ಹಾಗೂ ವಿಭಿನ್ನ ಸಂಸ್ಕೃತಿಯ ದೇಶಕ್ಕೆ ಸರ್ವರಿಗೂ ಸಮ್ಮತವಾಗುವ ಸಂವಿಧಾನ ರಚಿಸುವುದು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ ಶತಮಾನಗಳ ಕಾಲ ಪರಕೀಯರ ಆಳ್ವಿಕೆಗೆ ಒಳಗಾಗಿ ಛಿದ್ರ ಛಿದ್ರ್ರವಾಗಿದ್ದ ಹಾಗೂ 17 ನೇ ಶತಮಾನದ ನಂತರ ಬ್ರಿಟೀಷರ ವಶವಾಗಿದ್ದ ಭಾರತದ ಅಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು ತೀರ ಗೊಂದಲಮಯವಾಗಿತ್ತು, ಈ ಎಲ್ಲಾ ಸಮಸ್ಯೆಗಳ ನಿವಾರಣೆ ಒಂದು ದೊಡ್ಡ ಸವಾಲಾಗಿತ್ತು. ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಸೂಕ್ತ ರಾಜಕೀಯ ವ್ಯವಸ್ಥೆಯನ್ನು ನಾವು ರೂಪಿಸಬೇಕಿತ್ತು.
ಈ ದಿನ ಭಾರತೀಯರು ಸಂಸತ್ತಿನಲ್ಲಿ ದೀರ್ಘಕಾಲ ಪಾಲಿಸಬೇಕಾದ ಕನಸು ಅರಿತುಕೊಂಡು ಭಾರತೀಯ ಒಕ್ಕೂಟಕ್ಕೆ ಸಂವಿಧಾನವನ್ನು ಅನುಮೋದಿಸಿದ ದಿನ. ಅಷ್ಟು ಮಾತ್ರವಲ್ಲ ಭಾರತವನ್ನು ಒಂದು ಜಾತ್ಯತೀತ, ಸಾರ್ವಭೌಮ ಗಣರಾಜ್ಯವನ್ನಾಗಿ ರೂಪಿಸಿ ಆ ಮೂಲಕ ಭಾರತ ವೈವಿದ್ಯತೆಯಲ್ಲಿ ಏಕತೆಯನ್ನು ಸಾಧಿಸಲು ಸಾಧ್ಯವಾಯಿತು. ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ನ್ಯಾಯ ಕ್ಷೇತ್ರಗಳಲ್ಲಿ ಎಲ್ಲ ಜನರಿಗೂ ಸಮಾನ ಅವಕಾಶ ಮತ್ತು ಹಕ್ಕುಗಳು ಇರುವ ಲೋಕ ಸಮ್ಮತವಾದ ಸಂವಿಧಾನವಾಗಿದೆ.
ಭಾರತದ ಜನ ಈ ದೇಶದ ಪ್ರಜೆಗಳಾಗಿ ತಮ್ಮನ್ನು ತಾವು ಕಂಡುಕೊಂಡ ದಿನ. ಸ್ವಾತಂತ್ರ್ಯ ದೇಶದ ಸಾಮಾನ್ಯ ಪ್ರಜೆಗಳಿಗೆ ವಿಧಿವತ್ತಾಗಿ ಲಭ್ಯವಾದ ದಿನ. ಇದೊಂದು ಚಾರಿತ್ರಿಕ ತಿರುವು. ಪ್ರಪಂಚದ ಎಷ್ಟೋ ಸ್ವಾತಂತ್ರ್ಯ ದೇಶಗಳಿಗೆ ಮೇಲ್ಪಂಕ್ತಿ ಹಾಕಿದ ವಿದ್ಯಮಾನವಿದು.
ಪ್ರಜಾಪ್ರಭುತ್ವದ ತಳಹದಿಯಾದ ಸಂವಿಧಾನವನ್ನು ಹಾಗೂ ಮಾನವ ಹಕ್ಕುಗಳನ್ನು ನೀಡಿದ ಈ ಸುದಿನದ ನೆನಪು ಅವಿಸ್ಮರಣೀಯ. ಪ್ರಥಮವಾಗಿ ಪ್ರಜಾತಂತ್ರ ವ್ಯವಸ್ಥೆಯ ಬೇರಿಗೆ ನೀರು ಸುರಿದು ತಮ್ಮ ಬದುಕು ಸವೆಸಿದ ಎಲ್ಲಾ ದೇಶಾಭಿಮಾನಿ ಬಂಧುಗಳನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.
ಸ್ವಾತಂತ್ರ್ಯದ ಹಣತೆ ಹಚ್ಚಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ನಿಜಮನುಷ್ಯತ್ವಕ್ಕಾಗಿ ಹಂಬಲಿಸಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್, ಹರಿದು ಹಂಚಿಹೋಗಿದ್ದ ಒಕ್ಕೂಟಗಳನ್ನು ಒಗ್ಗೂಡಿಸಿ ಗಣರಾಜ್ಯ ವ್ಯವಸ್ಥೆಗೆ ಬುನಾದಿ ಹಾಕಿದ ‘ಉಕ್ಕಿನ ಮನುಷ್ಯ’ ವಲ್ಲಭಬಾಯಿ ಪಟೇಲ್… ಹೀಗೆ ನೆನಪಿಸಿಕೊಳ್ಳಬೇಕಾದ ಮಹನೀಯರ ಪಟ್ಟಿಗೆ ಕೊನೆಯಿಲ್ಲ.
ರಾಷ್ಟ್ರದ ಪ್ರಥಮ ಮಹಾ ದಂಡನಾಯಕರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರು ರಾಷ್ಟ್ರದ ಸೇನಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವುದು ಸ್ಮರಣೀಯವಾಗಿದೆ.
ಕಳೆದ 75 ವರ್ಷಗಳಲ್ಲಿ ದೇಶಕ್ಕೆ ಎದುರಾದ ಸಮಸ್ಯೆ/ ಸವಾಲುಗಳನ್ನು ಒಮ್ಮನಸ್ಸಿನಿಂದ ಎದುರಿಸಿ ಗಣತಂತ್ರವನ್ನು ಸಂರಕ್ಷಿಸಿದ್ದೇವೆ, ‘ವ್ಯಕ್ತಿಯ ಹಿತಕ್ಕಿಂತ ಸಮಾಜದ ಹಿತವೇ ಮುಖ್ಯ’ ಎಂಬ ನಮ್ಮ ಪೂರ್ವಿಕರ ಜೀವನತತ್ವವನ್ನು ನಾವಿಂದು ಅರ್ಥಮಾಡಿಕೊಂಡು ಅನುಸರಿಸಬೇಕಿದೆ.
ನಮ್ಮ ಸಂವಿಧಾನವನ್ನು ಕೆ.ಎಂ.ಮುನ್ಷಿ ಅವರು “ರಾಜಕೀಯ ಜಾತಕ” ಎಂದು ಕರೆದಿದ್ದಾರೆ. ನಮ್ಮ ಸಂವಿಧಾನದಲ್ಲಿ ಪ್ರಸ್ತುತ 448 ವಿಧಿಗಳಿದ್ದು, 6 ಮೂಲಭೂತ ಹಕ್ಕುಗಳಿವೆ. ಈ ಹಕ್ಕುಗಳು ಮಾನವನ ಸುಖಕರ ಜೀವನಕ್ಕೆ ಬೇಕಾಗುವ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ನಮ್ಮ ಸಂವಿಧಾನ ಅಳವಡಿಸಿಕೊಂಡಿರುವ ಉದಾರ ತತ್ವಗಳಿಂದಾಗಿ ಏಕರಾಷ್ಟ್ರವಾಗಿ ಉಳಿದಿದೆ. ಸಂವಿಧಾನದಲ್ಲಿ ಹಕ್ಕುಗಳ ಜೊತೆಗೆ ನಾಗರಿಕರ ಕರ್ತವ್ಯಗಳನ್ನು ತಿಳಿಸಲಾಗಿದೆ.
ಅಂತೆಯೇ ಸಂವಿಧಾನವೆಂದರೆ ಆಳುವ ಪ್ರಮುಖ ನಿಯಮಗಳ ಸಂಯೋಜನೆ. ಅದು ದೇಶದ ಅತ್ಯುನ್ನತ ಮೂಲಭೂತ ಶಾಸನದ ನಿರೂಪಣೆ ಹಾಗೂ ಸರ್ಕಾರದ ಕಾರ್ಯವೈಖರಿಯ ಮೂಲ ಸೆಲೆಯಾಗಿದೆ. ಒಂದು ರಾಜ್ಯ ಕ್ರಮಬದ್ದವಾಗಿ ಜನರಿಗೆ ಹಿತವೆನಿಸುವ ರೀತಿಯಲ್ಲಿ ನಿರಾಂತಕವಾಗಿ ಆಡಳಿತ ನಡೆಸಲು ಸಂವಿಧಾನ ಅತ್ಯವಶ್ಯಕವಾಗಿದೆ.
ಭಾರತದ ಮೊದಲ ರಾಷ್ಟ್ರಾಧ್ಯಕ್ಷರಾಗಿದ್ದ ಡಾ.ರಾಜೇಂದ್ರ ಪ್ರಸಾದ್ ರವರು 1950 ಜನವರಿ 26 ರ ಮೊದಲ ಗಣರಾಜ್ಯೋತ್ಸವವನ್ನು ಕುರಿತು ಮಾತನಾಡುತ್ತಾ ಹೀಗೆ ಹೇಳಿದ್ದಾರೆ. “ನಾವೀಗ ಮತ್ತೆ ಈ ದೇಶಕ್ಕಾಗಿ ಅನೇಕ ತ್ಯಾಗಗಳಿಗೆ ತಯಾರಾಗಬೇಕಾಗಿದೆ. ಈ ದೇಶವನ್ನು ಶಾಂತಿಯುತ ಹಾಗೂ ಪ್ರಗತಿಪರ ರಾಷ್ಟ್ರವನ್ನಾಗಿಸುವ ನಮ್ಮ ಹಿರಿಯರ ಕನಸನ್ನು ನನಸು ಮಾಡಲು ನಾವೆಲ್ಲರೂ ಪಣತೊಡಬೇಕಾಗಿದೆ. ವರ್ಗರಹಿತ ಸಮಾಜ ನಿರ್ಮಿಸಬೇಕಾಗಿದೆ. ಪರಸ್ಪರ ಸಹಕಾರ ಭಯಮುಕ್ತ ವಾತಾವರಣದಲ್ಲಿ ನಾವು ಬದುಕಬೇಕಾಗಿದೆ. ನಮ್ಮ ದೇಶದ ರೈತಾಪಿವರ್ಗ, ಸೈನಿಕರು ಹಾಗೂ ಶ್ರಮಿಕರ ಭಾವನೆಗಳನ್ನು ನಾವು ಗೌರವಿಸಬೇಕಿದೆ. ಆ ಮೂಲಕ ಒಂದು ಶ್ರೀಮಂತ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ನಾವೆಲ್ಲರೂ ದೀಕ್ಷೆ ತೊಡಬೇಕಾದ ದಿನ ಇದಾಗಿದೆ.”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಕೈಗೊಂಡಿರುವುದು ಐತಿಹಾಸಿಕ ದಾಖಲೆಯೇ ಸರಿ.
12 ನೇ ಶತಮಾನದಲ್ಲಿ ಕಾಯಕ ಜೀವಿಗಳ ಚಳುವಳಿಯ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ನಡೆಸಿ ವಚನಗಳ ಮೂಲಕ ಜಾಗೃತಿ ಮೂಡಿಸಿದ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಿಸಿರುವುದು ವಿಶೇಷವಾಗಿದೆ.
ಬಸವ ಪಥಕ್ಕೆ ಅಗ್ರಸ್ಥಾನ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿರುವುದು ವಿಶೇಷವಾಗಿದೆ. ಬಸವೇಶ್ವರರು ಕನ್ನಡ ನಾಡಿನ ಸಂಸ್ಕøತಿ ಪ್ರತಿಪಾದಿಸಿದ ಮೌಲ್ಯಗಳ ರೂಪಕವಾಗಿ ನೋಡುವುದರಿಂದ ನಾಡಿಗೆ ಹೆಚ್ಚಿನ ಅನುಕೂಲವಾಗಿದೆ. ಅನ್ನಭಾಗ್ಯ ಸೇರಿದಂತೆ ಐದು ಗ್ಯಾರಂಟಿಗಳ ಮೂಲಕ ಸರ್ವೋದಯ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಆ ನಿಟ್ಟಿನಲ್ಲಿ ಬಸವಣ್ಣನವರ ದಾಸೋಹದ ಪರಿಕಲ್ಪನೆಗೆ ಪೂರಕವಾಗಿದೆ.
ಬಸವಣ್ಣನವರ ಕತೃತ್ವ ಶಕ್ತಿಯಿಂದ ರೂಪುಗೊಂಡ ವಚನಕಾರರ ಅನುಭವ ಮಂಟಪ ಇಂದಿನ ಪ್ರಜಾಪ್ರಭುತ್ವದ ಅಡಿಗಲ್ಲೇ ಆಗಿದೆ. ನಾಡಿನ ಸಾಂಸ್ಕøತಿಕ, ಸಾಹಿತ್ಯಕ, ಪರಂಪರೆ ವಿಶ್ವಕ್ಕೆ ಕೊಡುಗೆ ನೀಡಿರುವ ವಿಶ್ವ ಮಾನವ ಪರಂಪರೆಯ ಬಹುಮುಖ್ಯವಾದ ಕೊಂಡಿಯಾಗಿದ್ದಾರೆ.
ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿಸಿರುವುದು ವಿಶೇಷವಾಗಿದೆ. ಹಾಗೆಯೇ ರಾಷ್ಟ್ರ ಮಟ್ಟದ ಹಾಕಿ ಕ್ರೀಡಾಕೂಟವು ಕೊಡಗು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿರುವುದು ದಾಖಲೆಯೇ ಸರಿ.
ಕೊಡಗಿನ ಕ್ಯಾಪ್ಟನ್ ಶರಣ್ಯ ರಾವ್ ಅವರು ದೆಹಲಿಯಲ್ಲಿ ಇಂದು ನಡೆಯುತ್ತಿರುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭೂಸೇನೆಯ ಅಗ್ನಿವೀರರ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸೇನೆಯ ಮೂರು ವಿಭಾಗಗಳು ಒಟ್ಟಿಗೆ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಭೋಸರಾಜು ಹೇಳಿದರು.
ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಬಡವರ ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನಿಸಿದೆ. ಆ ನಿಟ್ಟಿನಲ್ಲಿ ‘ಶಕ್ತಿ’ ಯೋಜನೆಯು ಜೂನ್, 11 ರಂದು ಪ್ರಥಮ ಯೋಜನೆಯಾಗಿ ಜಾರಿಗೊಂಡಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಒದಗಿಸಿರುವುದು ವಿಶೇಷವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜನವರಿ, 20 ರವರೆಗೆ 33,21,406 ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದು, ಸುಮಾರು 12.83 ಕೋಟಿ ರೂ. ಭರಿಸಲಾಗಿದೆ.
ಹಾಗೆಯೇ ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 1,50,348 ಕುಟುಂಬಗಳು ಹೆಸರು ನೋಂದಾಯಿಸಿದ್ದಾರೆ. ಈ ಪ್ರಕ್ರಿಯೆ ಮುಂದುವರಿದಿದೆ. ಮಡಿಕೇರಿ ತಾಲ್ಲೂಕಿನಲ್ಲಿ 40,000, ಕುಶಾಲನಗರ 35,100, ಸೋಮವಾರಪೇಟೆ 25,000, ವಿರಾಜಪೇಟೆ ತಾಲ್ಲೂಕು 25,051 ಹಾಗೂ ಪೊನ್ನಂಪೇಟೆ ತಾಲ್ಲೂಕಿನಲ್ಲಿ 25,197 ಮಂದಿ ನೋಂದಣಿ ಮಾಡಿದ್ದು, ಉಚಿತ ವಿದ್ಯುತ್ ಕಲ್ಪಿಸಲಾಗಿದೆ.
ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ 48 ಯೂನಿಟ್‍ಗಿಂತ ಕಡಿಮೆ ವಿದ್ಯುತ್ ಬಳಸುವ ಎಲ್‍ಟಿ 2 ಗ್ರಾಹಕರಿಗೆ ಹೆಚ್ಚುವರಿ ಶೇ.10 ಬದಲು ಹೆಚ್ಚುವರಿ 10 ಯೂನಿಟ್ ಅರ್ಹತಾ ಯೂನಿಟ್‍ಗಳಾಗಿ ಒದಗಿಸಲು ನಿರ್ಧರಿಸಿರುವುದು ವಿಶೇಷವಾಗಿದೆ.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 9746 ಅಂತ್ಯೋದಯ (ಆದ್ಯತಾ) ಹಾಗೂ 1,01,156 ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳು ಚಾಲ್ತಿಯಲ್ಲಿದೆ. “ಅನ್ನಭಾಗ್ಯ ಯೋಜನೆ”ಯಡಿ ಎಎವೈ ಪ್ರತೀ ಪಡಿತರ ಚೀಟಿದಾರರಿಗೆ 35 ಕೆ.ಜಿ ಅಕ್ಕಿಯನ್ನು ಹಾಗೂ ಅದ್ಯತಾ (ಬಿಪಿಎಲ್) ಪಡಿತರ ಚೀಟಿದಾರರ ಪ್ರತೀ ಸದಸ್ಯರಿಗೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಒಟ್ಟು 1,10,902 ಆದ್ಯತಾ ಪಡಿತರ ಚೀಟಿ ಕುಟುಂಬಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಸರ್ಕಾರ ಬಿಪಿಎಲ್ ಫಲಾನುಭವಿಗಳಿಗೆ ಈಗಾಗಲೆ ವಿತರಿಸುತ್ತಿರುವ 05 ಕೆ.ಜಿ ಅಕ್ಕಿಯೊಂದಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಲು ಆದೇಶಿಸಲಾಗಿರುತ್ತದೆ. ಅಕ್ಕಿಯ ಕೊರತೆ ಇರುವ ಕಾರಣ ಹೆಚ್ಚುವರಿ 05 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಕೆ.ಜಿಗೆ 34 ರೂ ನಂತೆ ಪ್ರತೀ ಫಲಾನುಭವಿಗೆ ಮಾಹೆಗೆ ರೂ.170 ರಂತೆ ಡಿ.ಬಿ.ಟಿ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ನಗದನ್ನು ವರ್ಗಾವಣೆ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಜುಲೈ-2023 ರ ಮಾಹೆಯಿಂದ ಡಿಸೆಂಬರ್-2023ರ ಮಾಹೆಯವರೆಗೆ ಅನ್ನಭಾಗ್ಯ ಡಿ.ಬಿ.,ಟಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಜನವರಿ-2024 ರ ಮಾಹೆಯ ಡಿ.ಬಿ.ಟಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜುಲೈ-2023 ರ ಮಾಹೆಯಿಂದ ಡಿಸೆಂಬರ್-2023ರ ಮಾಹೆಯವರೆಗೆ ಕೊಡಗು ಜಿಲ್ಲೆಯಲ್ಲಿ ಒಟ್ಟು 28 ಕೋಟಿ ರೂ ಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ.
ಹಾಗೆಯೇ ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಮಾಹೆಯಾನ ರೂ.2000 ನ್ನು ಅವರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ನಗದು ಜಮೆ ಮಾಡಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 2023 ರಿಂದ ಡಿಸಂಬರ್ 2023 ರ ಅಂತ್ಯದವರೆಗೆ ಒಟ್ಟು 1,13,653 (ಶೇ.86.19) ರಷ್ಟು ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಅವರಿಗೆ ಆಗಸ್ಟ್ 2023 ರಿಂದ ಡಿಸೆಂಬರ್ ಅಂತ್ಯದವರೆಗೆ ಒಟ್ಟು 103.73 ಕೋಟಿ ರೂಪಾಯಿಗಳು ಬ್ಯಾಂಕ್ ಖಾತೆಗೆ ಜಮೆಯಾಗಿದೆ.
ಯುವನಿಧಿ ಯೋಜನೆಯಡಿ ಡಿಸೆಂಬರ್ 26 ರಿಂದ ನೋಂದಣಿ ಪ್ರಕ್ರಿಯೆ ಚಾಲನೆಗೊಂಡಿದ್ದು, ಪ್ರತೀ ತಿಂಗಳು 3,000 ಮತ್ತು 1500 ರೂ. ನಿರುದ್ಯೋಗ ಭತ್ಯೆಯನ್ನು ನೀಡುವ ಯೋಜನೆ ಆಗಿದೆ. ಜನವರಿ 12 ರಿಂದ ಅರ್ಹ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಆರಂಭವಾಗಿದೆ. ಯುವನಿಧಿ ಯೋಜನೆಗೆ ಅರ್ಹತೆ ಹೊಂದಿರುವವರು 1432 ಅಭ್ಯರ್ಥಿಗಳು ಇದ್ದು, ಜನವರಿ 19 ರ ಅವಧಿಗೆ ಜಿಲ್ಲೆಯಲ್ಲಿ 778 ಅಭ್ಯರ್ಥಿಗಳು ಯುವನಿಧಿ ಹೆಸರು ನೋಂದಾಯಿಸಿದ್ದಾರೆ.
ರಾಜ್ಯ ಸರ್ಕಾರವು ಭಾರತ ಸಂವಿಧಾನದ ಶ್ರೇಷ್ಟತೆ ಮತ್ತು ಗಣತೆಯನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡಿಸುವ ಸಲುವಾಗಿ “ಸಂವಿಧಾನ ಜಾಗೃತಿ ಜಾಥ’’ ಕಾರ್ಯಕ್ರಮ ರೂಪಿಸಿದೆ. ಇಂದು ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಜಿಲ್ಲೆಯಾದ್ಯಂತ ಫೆಬ್ರವರಿ 23 ರ ವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಚಿವ ಭೋಸರಾಜು ತಿಳಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಎನ್.ಪಿ.ಅನಿತಾ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ಇಲಾಖೆ, ಎನ್‍ಸಿಸಿ, ಗೃಹ ರಕ್ಷಕ ದಳದಿಂದ ನಡೆದ ಪಥಸಂಚಲನ ಗಮನ ಸೆಳೆಯಿತು. ಜಿಲ್ಲಾ ಶಸಸ್ತ್ರ ಮಿಸಲು ಪಡೆ, ಅರಣ್ಯ ಇಲಾಖೆ, ಎನ್‍ಸಿಸಿ ವಿದ್ಯಾರ್ಥಿಗಳು, ಸ್ಕೌಟ್ ಆಂಡ್ ಗೈಡ್ಸ್ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.









