ಮಡಿಕೇರಿ ಜ.29 NEWS DESK : ಮರಗೋಡುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಲೀಗ್ ಮಾದರಿಯ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ನಲ್ಲಿ ಹಿಂದೂ ಮಲಯಾಳಿ ಸಮಾಜ ಮರಗೋಡು ತಂಡ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ರನ್ನರ್ಸ್ ಪ್ರಶಸ್ತಿಯನ್ನು ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡದ ಪಡೆದುಕೊಂಡಿತ್ತು. ಎರಡು ಬಲಿಷ್ಠ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಹಿಂದೂ ಮಲಯಾಳಿ ಸಮಾಜ ಮರಗೋಡು ತಂಡದ ನಾಯಕ ಅಜಿತ್ ಚೆಟ್ಟಳ್ಳಿ ಅವರ ಏಕೈಕ ಗೋಲಿನಿಂದ ಹಿಂದೂ ಮಲಯಾಳಿ ಸಮಾಜ ಮರಗೋಡು ತಂಡ ಮಲಯಾಳಿ ಫುಟ್ಬಾಲ್ ಕಪ್ ಪ್ರಶಸ್ತಿ ಜಯಿಸಿತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯವು ಶ್ರೀನಿಥಿ ಎಫ್.ಸಿ ಒಂಟಿಯಂಗಡಿ ಹಾಗೂ ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡಗಳ ನಡುವೆ ನಡೆಯಿತು.ಅತ್ಯಂತ ಕುತೂಹಲಕಾರಿ ಪಂದ್ಯದಲ್ಲಿ ಎರಡು ತಂಡವು 1-1 ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿತ್ತು.ಶ್ರೀನಿಥಿ ಎಫ್.ಸಿ ತಂಡದ ಪರವಾಗಿ ಸತ್ಯ ಹಾಗೂ ಚಾಲೆಂಜರ್ಸ್ ಎಫ್.ಸಿ ತಂಡದ ಪರವಾಗಿ ವಿಷ್ಣು ಗೋಲುಗಳಿಸಿ ಡ್ರಾ ಪಡೆದುಕೊಂಡರು. ನಿಗದಿತ ಸಮಯದಲ್ಲಿ ಪಂದ್ಯವು ಸಮಬಲವಾದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.ಪೆನಾಲ್ಟಿ ಶೂಟೌಟ್ ನ ಐದು ಕಿಕ್ಕ್ ನಲ್ಲಿ ಎರಡು ತಂಡವು ಸಮಬಲ ಸಾಧಿಸಿತು.
ಸಡನ್ ಡೆತ್ ನತ್ತ ಮುಂದುವರೆದ ಪೆನಾಲ್ಟಿ ಶೂಟೌಟ್ ನಲ್ಲಿ ಅಂತಿಮವಾಗಿ ಸಡನ್ ಡೆತ್ ನಲ್ಲಿ 10-09 ಪೆನಾಲ್ಟಿ ಶೂಟೌಟ್ ಗೋಲುಗಳಿಂದ ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡವು ಗೆದ್ದು ಫೈನಲ್ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ಪಂದ್ಯವು ಹಿಂದೂ ಮಲಯಾಳಿ ಸಮಾಜ ಮರಗೋಡು ಹಾಗೂ ಚಾಮುಂಡೇಶ್ವರಿ ಫ್ರೆಂಡ್ಸ್ ಅರೆಕಾಡು ತಂಡಗಳ ನಡುವೆ ನಡೆಯಿತು. ಚಾಲೆಂಜರ್ಸ್ ಎಫ್.ಸಿ ತಂಡದ ನಾಯಕ ಅಜಿತ್ ಚೆಟ್ಟಳ್ಳಿ ಹಾಗೂ ಉಮೇಶ್ ಮರಗೋಡು ಅವರ ತಲಾ ಒಂದು ಗೋಲುಗಳ ನೆರವಿನಿಂದ ಚಾಮುಂಡೇಶ್ವರಿ ಅರೆಕಾಡು ತಂಡವನ್ನು ಮಣಿಸಿ ಹಿಂದೂ ಮಲಯಾಳಿ ಸಮಾಜ ಮರಗೋಡು ತಂಡವು 2-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆಯಿಟ್ಟಿತ್ತು.
ಜ.26 ರಿಂದ 28 ವರೆಗೆ ನಡೆದ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ 08 ತಂಡಗಳು ಹಾಗೂ 72 ಆಟಗಾರರು ಭಾಗವಹಿಸಿ, ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಹಿಂದೂ ಮಲಯಾಳಿ ಸಮಾಜ ಮರಗೋಡು ತಂಡ ನಾಯಕ ಅಜಿತ್ ಚೆಟ್ಟಳ್ಳಿ ಪಡೆದುಕೊಂಡರು. ಬೆಸ್ಟ್ ಡಿಫೆಂಡರ್ ಪ್ರಶಸ್ತಿಗೆ ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡದ ನಾಯಕ ಶರತ್(ಕಣ್ಣ) ಭಾಜನರಾದರು. ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡದ ಅಭಿಷೇಕ್ ಕುಶಾಲನಗರ ಹಾಗೂ ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಪ್ರಶಸ್ತಿಯನ್ನು ಶ್ರೀನಿಥಿ ಎಫ್.ಸಿ ಒಂಟಿಯಂಗಡಿ ತಂಡದ ಸತ್ಯ ಪಡೆದುಕೊಂಡರು. ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಚಾಮುಂಡೇಶ್ವರಿ ಫ್ರೆಂಡ್ಸ್ ಅರೆಕಾಡು ತಂಡದ ನೀಕ್ಷಿತ್ ಪಡೆದುಕೊಂಡಿತು.








