ಸಿದ್ದಾಪುರ ಜ.30 NEWS DESK : ವಿದ್ಯಾರ್ಥಿಗಳು ಶಾಲೆಗೆ ತಪ್ಪದೆ ಹಾಜರಾಗುವ ಮೂಲಕ ಶಿಕ್ಷಣದೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಕರೆ ನೀಡಿದರು.
ಚೆನ್ನಂಗಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ 43 ವಿದ್ಯಾರ್ಥಿಗಳಿಗೆ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಗುಣಮಟ್ಟದ ಶಾಲಾ ಬ್ಯಾಗ್ ಗಳನ್ನ ವಿತರಿಸಿ ಮಾತನಾಡಿ, ಕಾಡು ಪ್ರಾಣಿಗಳ ಹಾವಳಿ ನಡುವೆ ಶಿಕ್ಷಣ ಕಲಿಯುತ್ತಿರುವ ಶಾಲಾ ವಿದ್ಯಾರ್ಥಿಗಳು ಶಿಕ್ಷಕರುಗಳ ಮಾರ್ಗದರ್ಶನವನ್ನು ಮೈಗೂಡಿಸಿಕೊಂಡು ಶಿಕ್ಷಣದೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಬಂದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ಶಿಕ್ಷಣದೊಂದಿಗೆ ಮುಂದೆ ಬರಬೇಕೆಂದರು.
ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೆರಿರಾ ಅರುಣ್ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿ ಕಲಿಯುತ್ತಿರುವ ಶಾಲೆಗೆ ದಾನಿಗಳು ಹಲವು ರೀತಿಯಲ್ಲಿ ಸಹಕಾರ ನೀಡುತ್ತಿರುವುದರೊಂದಿಗೆ ಇತ್ತೀಚೆಗೆ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಹಕಾರ ನೀಡುವ ಭರವಸೆ ನೀಡಿದ ವಿಜು ಸುಬ್ರಮಣಿ ಅವರು ಇದೀಗ ನುಡಿದಂತೆ ನಡೆದುಕೊಂಡು ಎಲ್ಲಾ ಮಕ್ಕಳಿಗೆ ಗುಣಮಟ್ಟದ ಬ್ಯಾಗ್ ಗಳನ್ನು ವಿತರಿಸಿದ್ದಾರೆ ಅವರ ಸೇವಾ ಮನೋಭಾವದ ಸಮಾಜ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದವರು.
ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಕಳಿಸುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಲು ಮುಂದಾಗಬೇಕೆಂದರು.
ಪಾಲಿಬೆಟ್ಟದ ಸಮಾಜ ಸೇವಕ ಡಾ. ಎ.ಸಿ.ಗಣಪತಿ ಮಾತನಾಡಿ ಶಿಕ್ಷಕರ ಕಾಳಜಿಯಿಂದ ಶಾಲೆಯು ಸುಂದರ ಪರಿಸರದೊಂದಿಗೆ ಮಕ್ಕಳಿಗೆ ಶಿಕ್ಷಣ ಅಭ್ಯಾಸದ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನಿಯ. ಸರ್ಕಾರಿ ಶಾಲೆಯಾದರೂ ಮಕ್ಕಳ ಭವಿಷ್ಯ ರೂಪಿಸಲು ದಾನಿಗಳು ಹೆಚ್ಚಿನ ಸಹಕಾರ ನೀಡುತ್ತಿದ್ದು ವಿದ್ಯಾರ್ಥಿಗಳು ಕಲಿಕೆಯ ಮೂಲಕ ಉನ್ನತ ಶಿಕ್ಷಣ ಪಡೆದು ಪ್ರತಿಭಾನ್ವಿತರಾಗಿ ಮುಖ್ಯ ವಾಹಿನಿಗೆ ಬರಬೇಕೆಂದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಪುತ್ರ ಪೂಣಚ್ಚ ಮಾತನಾಡಿ, ಕಾಡು ಪ್ರಾಣಿಗಳ ಭಯದ ನಡುವೆ ಶಾಲೆಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ವಾಹನ ವ್ಯವಸ್ಥೆಯನ್ನು ಮಾಡಬೇಕಾಗಿದೆ.
ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಲು ಮುಂದಾಗ ಬೇಕಾಗಿದೆ. ಶಾಲೆಗೆ ತಪ್ಪದೇ ಹಾಜರಾಗುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ವೈಯಕ್ತಿಕವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕ್ಲಸ್ಟರ್ ಸಿಆರ್ ಪಿ ಕರುಂಬಯ್ಯ, ಬೆಳಗಾರ ಎಂ.ಎಸ್. ರವಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೇಬಿ, ಆದಿವಾಸಿ ಮುಖಂಡ
ಸಿದ್ದಪ್ಪ, ಶಾಲಾ ಮುಖ್ಯ ಶಿಕ್ಷಕಿ ಕೆ.ಕೆ ಸುಷಾ ಶಿಕ್ಷಕರುಗಳಾದ ಪ್ರತಿಮಾ, ಸತೀಶ್, ಮಂಜುಳ ಸೇರಿದಂತೆ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









