ಮಡಿಕೇರಿ ಜ.30 NEWS DESK : ಸಂಪಾಜೆ ಸಹಿತ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ತೋಟಕ್ಕೆ ದಾಳಿಮಾಡಿ ಕೃಷಿ ನಾಶ ಪಡಿಸುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ಸಂಪಾಜೆ ಕಾಂಗ್ರೆಸ್ ನಿಯೋಗ ಅರಣ್ಯ ಸಚಿವರನ್ನು ಭೇಟಿ ನೀಡಿ ಮನವಿ ಮಾಡಿದೆ.
ಕೆಪಿಸಿಸಿ ವಕ್ತಾರ ಟಿ.ಎಂ.ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿದ ಸಂಪಾಜೆಯ ಕಾಂಗ್ರೆಸ್ ನಾಯಕರು, ಆನೆ ಹಾವಳಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.
ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಶಾಲಾ ಮಕ್ಕಳು, ವಾಹನಸವಾರರು ಭಯದಲ್ಲಿ ತೇರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಭಾಗದಲ್ಲಿ ಹೆಚ್ಚಾಗಿ ರಬ್ಬರ್, ಅಡಿಕೆ ಕೃಷಿ ಇದ್ದು, ನಷ್ಟ ಅನುಭವಿಸುತ್ತಿರುವ ಕೃಷಿಕರಿಗೆ ಪರಿಹಾರ ಧನ ಒದಗಿಸುವುದು, ದಕ್ಷಿಣ ಕನ್ನಡ ಜಿಲ್ಲೆಗೆ ಎಲಿಫೆಂಟ್ ಟಾಸ್ಕ್ ಫೋರ್ಸ್ ನೇಮಕ ಮಾಡುವುದು, ಸೋಲಾರ್ ಬೇಲಿ ನಿರ್ಮಾಣಕ್ಕೆ ಸಹಾಯಧನ ಹೆಚ್ಚಿಸುವುದು, ಸಂಪಾಜೆ ಗ್ರಾಮದ ಸ್ಮಶಾನ ಜಾಗದ ಸಮಸ್ಯೆಗಳು, ಕಸ ವಿಲೇವಾರಿ ಜಾಗದ ಸಮಸ್ಯೆಗಳು ಸೇರಿದಂತೆ ವಿವಿಧ ಬೇಡಿಕೆಯ ಮನವಿಯನ್ನು ಸಲ್ಲಿಸಿದರು.
ಇದೇ ಸಂದರ್ಭ ಸಚಿವರು ಜಿಲ್ಲೆಗೆ ಭೇಟಿ ನೀಡಿ, ಸಮಸ್ಯೆ ಪರಿಹರಿಸುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಾವೀದ್ ಅಕ್ತರ್ ಹಾಜರಿದ್ದರು.
ನಿಯೋಗದಲ್ಲಿ ಸಂಪಾಜೆ ಗ್ರಾ.ಪಂ ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ಧಿಕ್ ಕೊಕ್ಕೋ, ಯುವ ಕಾಂಗ್ರೆಸ್ ಮುಖಂಡ ರಂಜಿತ್ ರೈ ಮೇನಾಲ, ಸಲೀಂ ಪೆರುಂಗೋಡಿ, ಉನೈಸ್ ಗೂನಡ್ಕ, ಸೌಕತ್ ಮೇನಾಲ ಇದ್ದರು.








