ಮಡಿಕೇರಿ ಜ.30 NEWS DESK : ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಲವು ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್, ಹೋಂ ಸ್ಟೇ ಮಾಲೀಕರು ಹಾಗೂ ಟ್ಯಾಕ್ಸಿ ಮಾಲಿಕರಿಗೆ ತರಬೇತಿ ಕಾರ್ಯಗಾರ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಹೆದ್ದಾರಿ ಫಲಕ ಹಾಗೂ ಸೈನೇಜ್ ಬೋರ್ಡ್‍ಗಳನ್ನು ಅಳವಡಿಸಲು ಉದ್ದೇಶಿಸಲಾಗಿದ್ದು, ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲು ಮುಂದಾಗಲಾಗಿದೆ ಎಂದು ಅವರು ಸಭೆಯ ಗಮನಕ್ಕೆ ತಂದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿಯಮಾನುಸಾರ ಅಗತ್ಯ ಕ್ರಮವಹಿಸಬೇಕು. ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ದೊರೆಯುವಂತಾಗಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 4 ಸಾವಿರ ಹೋಂ ಸ್ಟೇಗಳಿದ್ದು, ಸುಮಾರು 1900 ರಷ್ಟು ಹೋಂ ಸ್ಟೇಗಳು ನೋಂದಣಿಯಾಗಿವೆ. ಉಳಿದ ಹೋಂ ಸ್ಟೇಗಳನ್ನು ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.
ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಷಿಯೇಷನ್‍ನ ಅಧ್ಯಕ್ಷ ಬೆನ್ ಗಣಪತಿ ಮಾತನಾಡಿ, ಹೋಂ ಸ್ಟೇ ಆರಂಭಿಸುವಾಗ ಪ್ರವಾಸೋದ್ಯಮ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹಿಂಬರಹ ಪಡೆಯಬೇಕಿದೆ. ಜೊತೆಗೆ ಪೊಲೀಸ್ ಇಲಾಖೆಯಿಂದ ಮತ್ತು ಸ್ಥಳೀಯ ಸಂಸ್ಥೆಗಳಿಂದ ಎನ್‍ಒಸಿ ಪಡೆಯಬೇಕಿದೆ. ಆ ನಿಟ್ಟಿನಲ್ಲಿ ಸಕಾಲದಲ್ಲಿ ಪ್ರಕ್ರಿಯೆಗಳು ಆಗಬೇಕು ಎಂದು ಮನವಿ ಮಾಡಿದರು.
ಮಾಂದಲ್‍ಪಟ್ಟಿ ಮತ್ತು ಅಬ್ಬಿಪಾಲ್ಸ್ ಮತ್ತಿತರ ಕಡೆಗಳಲ್ಲಿ ಯೆಲ್ಲೋ ಬೋರ್ಡ್ ಹೊರತುಪಡಿಸಿ ವೈಟ್‍ಬೋರ್ಡ್ ವಾಹನಗಳು ಸಹ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಬಗ್ಗೆ ಮಾಹಿತಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಟ್ಯಾಕ್ಸ್ಸಿ ಮಾಲೀಕರು ಹಾಗೂ ಚಾಲಕರು ಒಂದು ದರ ನಿಗಧಿ ಮಾಡಿ ದರಪಟ್ಟಿಯ ನಾಮಫಲಕ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸಲಹೆ ಮಾಡಿದರು.
ಟ್ರಾವೆಲ್ ಅಸೋಷಿಯೇಷನ್ ಅಧ್ಯಕ್ಷ ಕುಪ್ಪಂಡ ವಸಂತ ಮಾತನಾಡಿ, ಟ್ಯಾಕ್ಸಿ ಚಾಲಕರು ಕಡ್ಡಾಯವಾಗಿ ಸಮವಸ್ತ್ರ, ಹಾಗೂ ಬ್ಯಾಡ್ಜ್ ಹೊಂದಿರಬೇಕು. ಟ್ಯಾಕ್ಸಿ ನಿಲುಗಡೆ ಸ್ಥಳದಲ್ಲಿ ದರ ನಿಗಧಿಪಡಿಸಿ ದರಪಟ್ಟಿಯ ನಾಮಫಲಕ ಅಳವಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಬಿ.ದೇವಯ್ಯ ಟ್ಯಾಕ್ಸಿ ಹಾಗೂ ಜೀಪುಗಳಿಗೆ ವೇಗ ನಿಯಂತ್ರಣ ಅಳವಡಿಸಬೇಕು ಎಂದು ಸಲಹೆ ನೀಡಿದರು.
ಹೋಂ ಸ್ಟೇ ಅಸೋಷಿಯೇಷನ್‍ನ ಮೋಂತಿ ಗಣೇಶ್ ಮಾತನಾಡಿ, ಮಾಂದಲ್‍ಪಟ್ಟಿಯಲ್ಲಿ ಅರಣ್ಯ ಇಲಾಖೆಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು. ಜೊತೆಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಟ್ಯಾಕ್ಸಿ ಸೇವೆ ಒದಗಿಸುತ್ತಿರುವವರು ಶಿಸ್ತು ಕಾಪಾಡಿಕೊಳ್ಳಬೇಕು. ಪ್ರತೀ 6 ತಿಂಗಳಿಗೊಮ್ಮೆ ಒಂದು ದಿನಕ್ಕೆ ಎಷ್ಟು ದರ ಎಂಬ ಬಗ್ಗೆ ದರಪಟ್ಟಿಯ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ವಿವಿಧ ಕಡೆಗಳಿಂದ ರಿವರ್ ರ್ಯಾಪ್ಟಿಂಗ್ ನಡೆಸುವ ಸಂಬಂಧ ಸಾಕಷ್ಟು ಅರ್ಜಿಗಳು ಬರುತ್ತಿವೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದರು.
ಪ್ರವಾಸಿ ತಾಣಗಳಾದ ರಾಜಾಸೀಟು ಮತ್ತು ಚೇಲಾವರ ಜಲಪಾತ ಹಾಗೂ ದುಬಾರೆ ಆನೆಶಿಬಿರ ಮತ್ತು ನಿಸರ್ಗಧಾಮ ಪ್ರವಾಸಿ ತಾಣಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಹಾಗೂ ಯೋಜನಾ ವರದಿಯನ್ನು ತಯಾರಿಸಲು ಮುಂದಾಗಲಾಗಿದೆ. ಹಾಗೆಯೇ ಕುಂಬೂರು ಗ್ರಾಮದ ಬಳಿ ಇರುವ ಮಕ್ಕಳ ಗುಡಿಬೆಟ್ಟ ಅಭಿವೃದ್ಧಿ ಪಡಿಸಲು ಯೋಜನಾ ವರದಿ ತಯಾರಿಸಲಾಗಿದೆ ಎಂದು ಅನಿತಾ ಭಾಸ್ಕರ್ ಅವರು ಸಭೆಯ ಗಮನಕ್ಕೆ ತಂದರು.
ಕೊಡಗು ಹೋಂ ಸ್ಟೇಗಳ ದರ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಮತ್ತಿತರ ಮಾಹಿತಿ ಒಳಗೊಂಡ `ವೆಬ್‍ಸೈಟ್’ ಅಭಿವೃದ್ಧಿ ಪಡಿಸಲು ಮುಂದಾಗಲಾಗಿದ್ದು, ಅನುಮತಿಗೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಕೋರಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಸರ್ಕಾರದಿಂದ ವೆಬ್‍ಸೈಟ್ ಅಭಿವೃದ್ಧಿಪಡಿಸಿ ಹೋಂಸ್ಟೇಗಳಿಗೆ ಸಂಬಂಧಿಸಿದಂತೆ ತಾಲ್ಲೂಕುವಾರು ನೋಂದಾಯಿತ ಹೋಂಸ್ಟೇಗಳ ನಿಖರ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.
ಪ್ರವಾಸಿಗರಿಗೆ ಆನ್‍ಲೈನ್ ಮೂಲಕ ಹೋಂಸ್ಟೇ ಮಾಹಿತಿ ದೊರೆಯುವಂತಾಗಬೇಕು. ಹೋಂ ಸ್ಟೇಗಳಿಗೆ ಸಂಬಂಧಿಸಿಂತೆ ಮುಂಚಿತವಾಗಿ ಕಾಯ್ದಿರಿಸಲು ಸಹಕಾರಿ ಆಗಲಿದೆ ಎಂದರು.
ಕೊಡವ ಹೆರಿಟೇಜ್ ಕೇಂದ್ರ ಸಂಬಂಧಿಸಿದಂತೆ 3.30 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಇನ್ನೂ ಹೊರಾಂಗಣ ಅಭಿವೃದ್ಧಿ ಆಗಬೇಕಿದೆ. ಆ ನಿಟ್ಟಿನಲ್ಲಿ ಕೊಡವ ಹೆರಿಟೇಜ್ ಹಸ್ತಾಂತರ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಕೆಲಸ ಪೂರ್ಣವಾದ ನಂತರ ಹಸ್ತಾಂತರ ಮಾಡಿಕೊಳ್ಳುವಂತೆ ಸಲಹೆ ಮಾಡಿದರು. ಕೆಲಸ ಪೂರ್ಣಗೊಳ್ಳದೆ ಪಡೆಯುವುದು ಬೇಡ ಎಂದು ಸಲಹೆ ಮಾಡಿದರು.
ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ಸ್ಥಳಗಳನ್ನು ಪ್ರತ್ಯೇಕವಾಗಿ ಗುರುತಿಸಿ ವೆಬ್‍ಸೈಟ್‍ನಲ್ಲಿ ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು.
ಗಾಜಿನ ಸೇತುವೆ ನಿರ್ಮಿಸಲು ಹಲವರಿಂದ ಬೇಡಿಕೆ ಬರುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಸಭೆಯ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಗಾಜಿನ ಸೇತುವೆ ನಿರ್ಮಿಸಲು ಸ್ವಂತ ಜಾಗ ಹೊಂದಿರಬೇಕು. ಪಾರ್ಕಿಂಗ್ ವ್ಯವಸ್ಥೆ ಇರಬೇಕು. ಅರಣ್ಯ ಇಲಾಖೆ ಅಥವಾ ಇಕೋ ಟೂರಿಸಂ ವ್ಯಾಪ್ತಿಗೆ ಬರಬಾರದು. ಈ ಎಲ್ಲಾ ಮಾನದಂಡಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ತಲಕಾವೇರಿ ಭಾಗಮಂಡಲ ಕ್ಷೇತ್ರವನ್ನು ಪವಿತ್ರ ಧಾರ್ಮಿಕ ಕ್ಷೇತ್ರವೆಂದು ಪರಿಗಣಿಸುವಂತಾಗಬೇಕು ಎಂದು ಎಂ.ಬಿ.ದೇವಯ್ಯ ಅವರು ಮನವಿ ಮಾಡಿದರು.
ಕೂರ್ಗ್ ಹೋಂ ಸ್ಟೇ ಅಸೋಷಿಯೇಷನ್‍ನ ಕೆ.ಎಂ.ಕರುಂಬಯ್ಯ, ಹೋಟೆಲ್ ಅಸೋಷಿಯೇಷನ್‍ನ ಉಪಾಧ್ಯಕ್ಷರಾದ ಜಾಹೀರ್ ಅಹಮದ್, ಕಾರ್ಯದರ್ಶಿ ನಾಸೀರ್ ಅಹಮ್ಮದ್, ಖಜಾಂಜಿ ಅಥಿತಿ ಭಾಸ್ಕರ್, ಸೋಮವಾರಪೇಟೆ ತಾಲ್ಲೂಕು ಹೋಂ ಸ್ಟೇ ಅಧ್ಯಕ್ಷರಾದ ರೋಹಿತ್ ಹಲವು ವಿಚಾರ ಕುರಿತು ಪ್ರಸ್ತಾಪಿಸಿ ಗಮನ ಸೆಳೆದರು.
ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಾಷಾ, ನಗರಸಭೆಯ ಪರಿಸರ ಎಂಜಿನಿಯರ್ ಸೌಮ್ಯ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಪರಿಸರ ಅಧಿಕಾರಿ ನೇತ್ರಾವತಿ ಇತರರು ಇದ್ದರು.
Breaking News
- *ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ*
- *ಅಂತರಾಷ್ಟ್ರೀಯ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿಯ ಅಲುಫ್ ಎ.ಆರ್ ಚಾಂಪಿಯನ್*
- *ಮಡಿಕೇರಿಯಲ್ಲಿ ತಂಬಾಕು ಮುಕ್ತ ಯುವ ಅಭಿಯಾನ : ರಾಷ್ಟ್ರದ ಸದೃಢತೆಗೆ ಯುವಜನರು ಕೈಜೋಡಿಸಿ: ಸಿವಿಲ್ ನ್ಯಾಯಾಧೀಶೆ ಶುಭ*
- *ಮಡಿಕೇರಿಯಲ್ಲಿ ಡಾ.ಅಖಿಲ್ ಕುಟ್ಟಪ್ಪ – ಅಶ್ವಥ್ ಅಯ್ಯಪ್ಪ ಸ್ಮರಣಾಥ೯ ಕ್ರಿಕೆಟ್ ಪಂದ್ಯಾವಳಿ : ಸಾಧಕ ಕ್ರೀಡಾಪಟುಗಳಾಗುವತ್ತ ಚಿತ್ತ ಹರಿಸಿ : ನಿವೃತ್ತ ಏರ್ ಮಾಷ೯ಲ್ ಕಾಯ೯ಪ್ಪ ಕರೆ*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡಿ : ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ*
- *ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿದ ಹರಪಳ್ಳಿ ರವೀಂದ್ರ*
- *ಕೂಡಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ : ಆಟೋ ಚಾಲಕರು ಕನ್ನಡ ನಾಡು-ನುಡಿಯ ರಾಯಭಾರಿಗಳು : ವಿ.ಪಿ.ಶಶಿಧರ್ ಬಣ್ಣನೆ*
- *ಗೋಣಿಕೊಪ್ಪ : ಮನಸ್ಸು ಮತ್ತು ಮನೆಯಿಂದಲೇ ಭ್ರಷ್ಟಾಚಾರ ಪ್ರಾರಂಭ : ಡಾ.ಕೆ.ಬಸವರಾಜು*
- *ಶಾಸಕ ಎ.ಎಸ್.ಪೊನ್ನಣ್ಣ ರಿಗೆ ವಿಧಾನಸಭಾಧ್ಯಕ್ಷರ ಕಚೇರಿಯಿಂದ ಕೊಡುಗೆ*
- *ಜಿಲ್ಲಾ ಮಟ್ಟದ ಚಾಂಪಿಯನ್ಶಿಪ್ನಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ*