ಕುಶಾಲನಗರ ಜ.31 NEWS DESK : ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಸೀಕೋ ಸಂಸ್ಥೆಯ ಮುಖ್ಯಸ್ಥರಾದ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ವತಿಯಿಂದ ದೇಶದಾದ್ಯಂತ ವಿದ್ಯಾರ್ಥಿಗಳಿಗೆ ಮತ್ತು ಯುವ ಜನತೆಗೆ ಇಂಧನ ಉಳಿತಾಯ ಕುರಿತು ವಿವಿಧ ಜಾಗೃತಿ ಕಾರ್ಯಕ್ರಮ ಅಂಗವಾಗಿ ರಾಜ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಹಯೋಗದಲ್ಲಿ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಯುವ ಜನತೆಯ ಜೊತೆಗೆ ಇಂಧನ ಉಳಿತಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆಯಿಂದಾಗಿ ಮುಂದಿನ ಪೀಳಿಗೆಗೆ ಒಂದು ಹನಿ ಶುದ್ಧ ಗಾಳಿ, ಸ್ವಚ್ಛ ನೀರು ಸಿಗದಂತಹ ಪರಿಸರ ನಿರ್ಮಾಣವಾಗುತ್ತಿದೆ. ಕಳೆದ ಮೂರು ದಶಕಗಳಲ್ಲಿ ವಾಯು ಮಾಲಿನ್ಯ ಅತಿಯಾಗಿದೆ. ಆಮ್ಲಜನಕದ ಸಿಲಿಂಡರ್ ಬಳಸಿ ಉಸಿರಾಡುವ ದಿನಗಳು ಮಾರ್ಪಾಡಾಗುತ್ತಿದೆ. ಶುದ್ಧ ನೀರು ಹರಿಯುತ್ತಿರುವ ನದಿಗಳು ಕಣ್ಮರೆಯಾಗುತ್ತಿದೆ. ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಅತಿವೃಷ್ಠಿ, ಅನಾವೃಷ್ಠಿ ಉಂಟಾಗುತ್ತಿವೆ. ಇಂಗಾಲದ ನಿಯಂತ್ರಣ ತಡೆಯುವಲ್ಲಿ ಪ್ರತಿಯೊಬ್ಬರೂ ಎಚ್ಚರವಹಿಸಬೇಕು. ಪರ್ಯಾಯ ಶಕ್ತಿಗಳ ಕಡೆಗೆ ಸರ್ಕಾರ ಹೆಚ್ಚು ಒತ್ತು ನೀಡುತಿದ್ದು, ಇಂಧನ ಉಳಿತಾಯ ದೇಶದ ಆರ್ಥಿಕತೆ ಸ್ಥಿರತೆ ಕಾಪಾಡುವಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ ಎಂದು ತಿಳಿಸಿದರು. ಯಾವುದೇ ವಸ್ತುವನ್ನು ಉತ್ಪಾದಿಸುವ ಸಂದರ್ಭ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರಿರುತ್ತದೆ. ಒಂದು ತಟ್ಟೆ ಅನ್ನ ನಮ್ಮ ತಟ್ಟೆಗೆ ತಲುಪಲು, ಸಾವಿರಾರು ಲೀಟರ್ ನೀರು, ಮಣ್ಣು, ಗಾಳಿ, ಬೆಳಕು ಮತ್ತಿತರ ಮೂಲ ಸೌಲಭ್ಯಗಳ ಬಳಕೆಯಾಗಿರುತ್ತದೆ. ಆದ್ದರಿಂದ ಪರಿಸರ ಸ್ನೇಹಿ ಜೀವನವನ್ನು ಅಳವಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್ ಕುಮಾರ್, ಉಪನ್ಯಾಸಕ ಶ್ರೀನಾಥ್, ವಿಶ್ವನಾಥ್, ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿಭಾಗಿಯ ಪ್ರಮುಖರಾದ ಜಯಣ್ಣ ಪ್ರಸನ್ನ ಕುಮಾರ್, ಪ್ರದೀಪ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್ ಇದ್ದರು.
ಕಳೆದ ಮೂರು ದಿನಗಳಿಂದ ಕುಶಾಲನಗರದ ಕನ್ನಡಭಾರತಿ ಕಾಲೇಜು, ಮೂಕಾಂಬಿಕ ಪ್ರೌಢಶಾಲೆ, ಕೂಡುಮಂಗಳೂರು ಸರಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯಗಾರವನ್ನು ಡಾ. ಹರೀಶ್ ಹಮ್ಮಿಕೊಂಡಿದ್ದರು.