ಕುಶಾಲನಗರ ಫೆ.1 NEWS DESK : ಧರ್ಮದ ತಳಹದಿಯಿಂದ ಮಾತ್ರ ಮನುಷ್ಯನಿಗೆ ಆಂತರಿಕವಾದ ಸುಖ, ಶಾಂತಿ ಹಾಗೂ ಮಾನಸಿಕವಾದ ನೆಮ್ಮದಿ ದೊರಕಲು ಸಾಧ್ಯ ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ನಿಜ ಶರಣ ಅಂಬಿಗರ ಚೌಡಯ್ಯ ಸ್ಮರಣೆ ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹನ್ನೆರಡನೇ ಶತಮಾನ ಈ ಮಾನವ ಜಗತ್ತು ಕಂಡ ಸುವರ್ಣ ಶತಮಾನ. ಅಂದು ವಚನಕಾರರು ಮಾಡಿದ ಚಳುವಳಿ ಸಾರ್ವಕಾಲಿಕವಾದುದು. ವಚನಕಾರರು ನಡೆದಂತೆ ನುಡಿದರು. ನುಡಿದಂತೆ ನಡೆದರು.
ಸಮಾಜದಲ್ಲಿದ್ದಂತಹ ಮೌಢ್ಯಗಳು ಹಾಗೂ ಕಂದಾಚಾರಗಳ ವಿರುದ್ಧ ಅಂಬಿಗರ ಚೌಡಯ್ಯ ಕಟುವಾದ ಶಬ್ಧಗಳ ಮೂಲಕ ವಚನಗಳನ್ನು ಬರೆದು ಬಹು ದೊಡ್ಡ ಚಳುವಳಿಯನ್ನು ಮಾಡಿದ್ದರ ಬಗ್ಗೆ ಶ್ರೀಗಳು ವಿವರಿಸಿದರು.
ಬಸವಣ್ಣ, ಅಲ್ಲಮ ಪ್ರಭುಗಳು, ಅಕ್ಕಮಹಾದೇವಿ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ ಮೊದಲಾದ ಶರಣರು ಹಾಕಿ ಕೊಟ್ಟ ಧರ್ಮದ ತಳಹದಿಯನ್ನು ಕಡೆಗಣಿಸಿದ್ದರಿಂದಲೇ ಸಮಾಜದಲ್ಲಿ ಎಲ್ಲೆಡೆ ಅಶಾಂತಿ, ಅತೃಪ್ತಿ, ಭಯೋತ್ಪಾದಕತೆ, ಕಳ್ಳತನ, ಮೋಸ, ದರೋಡೆ ಗಳು ಹೆಚ್ಚುತ್ತಿವೆ ಎಂದು ಸದಾಶಿವ ಶ್ರೀಗಳು ವಿಷಾದಿಸಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ವಚನಕಾರರು ಬರೆದ ವಚನಗಳ ಸಾರಗಳನ್ನು, ಶರಣರ ವಿಚಾರಗಳನ್ನು ಇಂದಿನ ಎಳೆಯ ಮಕ್ಕಳ ಮನಸಲ್ಲಿ ಬಿತ್ತುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ನಿಜ ಶರಣ ಮಡಿವಾಳ ಮಾಚಯ್ಯ ಅವರ ಜೀವನ ಹಾಗೂ ಸಾಧನೆಗಳ ಕುರಿತು ಪ್ರವಚನ ನೀಡಿದ ಕವಯತ್ರಿ ಹಾಗೂ ಸಾಹಿತಿ ರಾಣಿ ವಸಂತ್,
ಹನ್ನೆರಡನೇ ಶತಮಾನದ ವಚನಕಾರರ ಪೈಕಿ ದೋಣಿ ನಡೆಸುವ ಕಾಯಕ ಮಾಡುತ್ತಿದ್ದ ನಿಜ ಶರಣ ಅಂಬಿಗರ ಚೌಡಯ್ಯ ನಿಷ್ಠುರವಾಗಿಯೇ ವಚನಗಳನ್ನು ಬರೆದು ಸಮಾಜವನ್ನು ಜಾಗೃತಗೊಳಿಸಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಶರಣರು ರಚಿಸಿದ ವಚನಗಳನ್ನು ನಿತ್ಯವೂ ಪಠನ ಮಾಡುವ ಮೂಲಕ ಅವುಗಳ ಸಾರವನ್ನು ಅರಿಯಲು ಕರೆಕೊಟ್ಟರು.
ಮುಖ್ಯ ಅತಿಥಿಯಾಗಿದ್ದ ಕುಶಾಲನಗರದ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಶ್ರೀಕಾಂತ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿನ ನಿತ್ಯದ ಆಗುಹೋಗುಗಳ ಬುತ್ತಿಯೇ ವಚನ ಸಾಹಿತ್ಯ. ವಚನಕಾರರಲ್ಲಿ ಕಾಯಕ ಪ್ರಜ್ಞೆ ಪ್ರಮುಖವಾಗಿತ್ತು ಎಂದು ವಚನಕಾರರ ಉದ್ದೇಶಗಳನ್ನು ವಿಶ್ಲೇಷಿಸಿದರು.
ಅವಿಭಕ್ತ ಕುಟುಂಬಗಳ ಕಣ್ಮರೆಯಿಂದಾಗಿ ಇಂದಿನ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಕಾಣುತ್ತಿಲ್ಲ ಎಂದು ಶ್ರೀಕಾಂತ್ ವಿಷಾದಿಸಿದರು.
ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಬ್ಬಾಲೆ ದಿನೇಶ್, ಶಿಕ್ಷಕ ಸಿ.ಪಿ.ಮಂಜು ಕೊಡ್ಲಿಪೇಟೆ ಸೋಮಶೇಖರ ಶಾಸ್ತ್ರಿ ಇದ್ದರು.
ವಿದ್ಯಾರ್ಥಿಗಳಿಂದ ಅಂಬಿಗರ ಚೌಡಯ್ಯ ಅವರ ವಚನಗಳ ಗಾಯನ ನಡೆಯಿತು. ವಿದ್ಯಾರ್ಥಿನಿ ನವ್ಯ ಸ್ವಾಗತಿಸಿ ಶ್ರಾವ್ಯ ವಂದಿಸಿದರು.