ಕೂಡಿಗೆ ಫೆ.1 : ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೋಮವಾರಪೇಟೆ
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ .ಭಾಗ್ಯಮ್ಮ ಮಾತನಾಡಿ, ಈ ಸರ್ಕಾರಿ ಶಾಲೆಯ ಪ್ರಗತಿಗೆ ಪೋಷಕರು ಮತ್ತು ಸಮುದಾಯ ಹಾಗೂ ಹಳೇ ವಿದ್ಯಾರ್ಥಿಗಳು ಜತೆಗೂಡಿ ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ಅಭಿವೃದ್ಧಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಶಾಲೆಯ ಮುಖ್ಯ ಶಿಕ್ಷಕರು ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಶಾಲಾ ಸ್ವಚ್ಛತೆ ಹಾಗೂ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಸರ್ಕಾರಿ ಶಾಲೆಯಲ್ಲಿ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗೆ ಮಕ್ಕಳ ಸಂಖ್ಯೆಯನ್ನು ಹೆಚ್ಚು ದಾಖಲಿಸುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಉತ್ತಮ ಶೈಕ್ಷಣಿಕ ವಾತಾವರಣ ಇದರಿಂದ ಮಕ್ಕಳ ಕಲಿಕೆಗೆ ಹೆಚ್ಚಿನ ಉತ್ಸುಕತೆ ಇರುವುದು ಹೆಮ್ಮೆಯ ಸಂಗತಿ. ಗ್ರಾಮದ ಎಲ್ಲರೂ ಒಗ್ಗೂಡಿ ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಇತರೆ ಶಾಲೆಗಳಿಗೆ ಮಾದರಿ ಎಂದು ಭಾಗ್ಯಮ್ಮ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಎಸ್.ಎ.ಯೋಗೇಶ್, ಶಾಲೆಗೆ ದಾನಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಶಾಲಾ ಪ್ರಗತಿಗೆ ನೀಡುತ್ತಿರುವ ಸಹಕಾರದ ಬಗ್ಗೆ ವಿವರಿಸಿದರು. ಶಾಲೆಯಲ್ಲಿ ಈಗ ಎಲ್.ಕೆ.ಜಿ. ತೆರೆದಿದ್ದು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಯು.ಕೆ.ಜಿ.ಆರಂಭಿಸಲಾಗುವುದು ಎಂದರು.
ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ಈ ಶಾಲೆಯು ಖಾಸಗಿ ಶಾಲೆಗೂ ಪೈಪೋಟಿ ನೀಡುತ್ತಿರುವ ಇಂತಹ ಸರ್ಕಾರಿ ಶಾಲೆಗಳ ಪ್ರಗತಿಗೆ ಎಲ್ಲರೂ ಸಹಕರಿಸಬೇಕು ಎಂದರು.
ಮಕ್ಕಳ ಶೈಕ್ಷಣಿಕ ಹಾಗೂ ಪ್ರಗತಿಗೆ ಪೋಷಕರು ಹಾಗೂ ಸಮುದಾಯ ಸಹಕರಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಜಿ.ಎಂ.ಹೇಮಂತ್ ಮಾತನಾಡಿ, ಸರ್ಕಾರಿ ಶಾಲಾ ಪ್ರಗತಿಗೆ ಸ್ಥಳೀಯ ಸಮುದಾಯದ ಸಹಭಾಗಿತ್ವದೊಂದಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ರಮೇಶ್ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಕಲಿಕೆಗೆ ಹೆಚ್ಚಿನ ಪೋತ್ಸಾಹ ನೀಡಬೇಕೆಂದು ತಿಳಿಸಿದರು.
ಮುಖ್ಯ ಶಿಕ್ಷಕ ಎಸ್.ಎ.ಯೋಗೇಶ್ ಶಾಲೆಯ ಪ್ರಗತಿ ಕುರಿತು ಹಾಗೂ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಗ್ರಾ.ಪಂ.ಅಧ್ಯಕ್ಷರಾದ ಭಾಸ್ಕರ್, ಗಿರೀಶ್, ಕೂಡುಮಂಗಳೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಜೆ.ಫಿಲೋಮಿನಾ, ಚಂದ್ರು ಮೂಡ್ಲಿಗೌಡ, ಗೌರಮ್ಮ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಕೂಡಿಗೆ ಸರ್ಕಾರಿ ಪಿಯೂ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಡಯಟ್ ಸಂಸ್ಥೆಯ ಉಪನ್ಯಾಸಕ ಸಿದ್ದೇಶ್ ಕುಮಾರ್, ಸಿಆರ್‍ಪಿ ಕೆ.ಶಾಂತಕುಮಾರ್, ನಿವೃತ್ತ ಶಿಕ್ಷಕ ಎಂ.ರಂಗಸ್ವಾಮಿ, ರಾಜೇಗೌಡ, ಆರೋಗ್ಯ ಇಲಾಖೆಯ ನಿವೃತ್ತ ನೌಕರ ಹೈದರಾಲಿ, ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿ.ಎ.ಗುರುಪ್ರಸಾದ್, ಟಿ.ಎಸ್.ಗುರುಪ್ರಸಾದ್, ಪ್ರಮುಖರಾದ ವಿ.ಎ.ಧರ್ಮ, ಕೆ.ಪಿ.ಗಿರೀಶ್, ಹರೀಶ್, ಕುಮಾರ್, ಆನಂದ, ಕೆ.ವಸಂತ ಇತರರು ಇದ್ದರು.
ವಿದ್ಯಾರ್ಥಿಗಳು ಹರ್ಷಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಎಸ್.ಎ.ಯೋಗೇಶ್ ಸ್ವಾಗತಿಸಿದರು. ಶಿಕ್ಷಕ ಎಚ್.ಟಿ.ನಾಗರಾಜ್ ವಂದಿಸಿದರು.
ಮೊದಲು ದೈಹಿಕ ಶಿಕ್ಷಣ ಶಿಕ್ಷಕ ಎನ್.ಡಿ.ಸೋಮಶೇಖರ್ ನೇತೃತ್ವದಲ್ಲಿ ಮಕ್ಕಳಿಂದ ಆಕರ್ಷಕ ಸಾಮೂಹಿಕ ಕವಾಯತು ನಡೆಸಲಾಯಿತು.
ನಂತರ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
ಸನ್ಮಾನ:: ಇದೇ ವೇಳೆ ಬಿಇಓ ಎಸ್ ಭಾಗ್ಯಮ್ಮ, ಗ್ರಾ.ಪಂ.ಅಧ್ಯಕ್ಷರಾದ ಭಾಸ್ಕರ್ ನಾಯಕ್, ಗಿರೀಶ್, ಆರೋಗ್ಯ ಇಲಾಖೆಯ ನಿವೃತ್ತ ನೌಕರ ಹೈದರಾಲಿ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.