ನಾಪೋಕ್ಲು ಫೆ.5 : ತುಳುನಾಡಿನ ಯಕ್ಷಗಾನ ಕಲೆಯನ್ನು ನಾಡಿನಾದ್ಯಂತ ಪ್ರಚುರಪಡಿಸುವ ಸದುದ್ದೇಶದಿಂದ ಮೂರ್ನಾಡಿನ “ಆಪ್ತಮಿತ್ರ ಬಳಗದ” ವ್ಯಾಟ್ಪ್ ಗ್ರೂಪ್ ವತಿಂಯಿದ ಮೂರ್ನಾಡಿನ ಪಾಂಡಾಣೆ ಮೈದಾನದಲ್ಲಿ ನಡೆಸಿದ ಉಚಿತ ಯಕ್ಷಗಾನ ಬಯಲಾಟ ಯಕ್ಷೋತ್ಸವ ಗಮನ ಸೆಳೆಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ `ಗಜಮೇಳ” ಎಂದೇ ಪ್ರಖ್ಯಾತಿ ಪಡೆದ ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಖ್ಯಾತ ಕಲಾವಿದರು `ಇಂದ್ರಪ್ರಸ’ ಎಂಬ ಯಕ್ಷ ಪ್ರಸಂಗವನ್ನು ನಡೆಸಿಕೊಟ್ಟರು.
ನಾಪೋಕ್ಲು, ಮೂರ್ನಾಡು ಸೇರಿದಂತೆ ವಿವಿಧ ಭಾಗಗಗಳಿಂದ ಬಂದಿದ್ದ ಸಾವಿರಾರು ಪ್ರೇಕ್ಷಕರಿಗೆ ಸಂಜೆ ಲಘು ಉಪಾಹಾರ ಮತ್ತು ರಾತ್ರಿ ವೇಳೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ನುರಿತ ಕಲಾವಿದರ ವೇಷ-ಭೂಷಣಗಳು, ಭಾಗವತಿಕೆ, ನೃತ್ಯ, ತಾಳ- ಮೇಳ ಹಾಗೂ ಮಾತುಗಾರಿಕೆಗೆ ಮಾರು ಹೋದ ಜನರು, ಚಪ್ಪಾಳೆ, ವಿಷಲ್ಗಳ ಸರಿಮಳೆಯೊಂದಿಗೆ ಕಲಾವಿದರಿಗೆ ಹಾಗೂ ಮೇಳಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಗದ ಪರವಾಗಿ ವಿಘ್ನೇಶ್ ಭಟ್ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.
ಆಪ್ತಮಿತ್ರ ಬಳಗ ಎಂಬ ವಾಟ್ಸಪ್ ಗ್ರೂಪ್ ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಐದು ವರ್ಷಗಳ ಹಿಂದೆ ಸ್ಥಾಪನೆಯಾದ ಈ ಬಳಗ 145 ಸದಸ್ಯರನ್ನೊಳಗೊಂಡಿದೆ. ತುರ್ತು ಸಂದರ್ಭಗಳಲ್ಲಿ ವಾಟ್ಸಪ್ ಗ್ರೂಪ್ ನ ಸದಸ್ಯರಿಂದ ಮಾತ್ರ ದೇಣಿಗೆ ಸಂಗ್ರಹಿಸಿ ಅಗತ್ಯವಿದ್ದವರಿಗೆ ನೆರವು ನೀಡುತ್ತಿದ್ದೇವೆ. ಸಮಾಜ ಸೇವೆಯೊಂದಿಗೆ ಕಲೆ ಮತ್ತು ಸಂಸ್ಕೃತಿಗೆ ಒತ್ತು ನೀಡುವ ನಿಟ್ಟಿನಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. :: ಕಾರ್ಯಕ್ರಮದ ಸಂಘಟಕರು ಚಂದ್ರಶೇಖರ ಕುಲಾಲ್ ::
ನಮ್ಮೊಂದಿಗೆ ಸಹಕರಿಸಿ ಪ್ರೋತ್ಸಾಹಿಸಿದ ಆಪ್ತಮಿತ್ರ ಬಳಗ ಹಾಗೂ ಕಲಾ ಪ್ರೇಮಿಗಳಿಗೆ ತುಂಬು ಹೃದಯದ ಧನ್ಯವಾದಗಳು. ಮುಂದೆಯೂ ನಮ್ಮಂಥ ಕಲಾವಿದರಿಗೆ ಇದೇ ರೀತಿಯ ಸಹಕಾರ ಸಿಗಲೆಂದು ಮನವಿ ಮಾಡುತ್ತೇನೆ. :: ಹರೀಶ್ ಭಟ್ ಬಲಂತಿಲ :: ಮಗೇರು, ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕರು.