ಮಡಿಕೇರಿ ಫೆ.5 NEWS DESK : ಕಂದಾಯ ಇಲಾಖೆಗೆ ಅರ್ಜಿದಾರರು ವಿನಾಕಾರಣ ಅಲೆಯುವುದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.
ಮಡಿಕೇರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ವೇಗ ನೀಡಬೇಕು ಮತ್ತು ಜನಪರವಾಗಿ ಕಾರ್ಯನಿರ್ವಹಿಸಬೇಕು.
ಜನರು ತಮ್ಮ ಕೆಲಸ ಬಿಟ್ಟು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ, ಇದು ನಿಲ್ಲಬೇಕು, ಸಮಯ ವ್ಯರ್ಥ ಆಗಬಾರದು. ಈ ಉದ್ದೇಶದಿಂದ ಕಂದಾಯ ಇಲಾಖೆಯಲ್ಲಿರುವ ಬಹಳ ವರ್ಷಗಳ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಕಾರ್ಯಗಳು ಚುರುಕಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಜನಪರವಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ತಹಶೀಲ್ದಾರ್ ನ್ಯಾಯಾಲಯದ ಪ್ರಕರಣಗಳು 3 ತಿಂಗಳಲ್ಲಿ ಪೂರ್ಣಗೊಳ್ಳಬೇಕು, ಆದರೆ ವರ್ಷಾನುಗಟ್ಟಲೆಯಿಂದ ಬಾಕಿ ಉಳಿದಿರುವ ಪ್ರಕರಣಗಳಿವೆ. ನಮ್ಮ ಸರಕಾರ ಬಂದ ಮೇಲೆ ಇದನ್ನು ಗಂಭೀರವಾಗಿ ಪರಿಗಣಿಸಿ, ಮೂರು ತಿಂಗಳೊಳಗೆ ವಿಲೇವಾರಿಯಾಗುವಂತೆ ಮಾಡಲಾಗಿದೆ. ಈಗಾಗಲೇ ಶೇ.95ರಷ್ಟು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಎಸಿ ನ್ಯಾಯಾಲಯದಲ್ಲಿ ಐದು ವರ್ಷ ಮೇಲ್ಪಟ್ಟ 32 ಸಾವಿರ ಪ್ರಕರಣಗಳು ಬಾಕಿ ಇದ್ದವು. ಈಗಾಗಲೇ 26 ಸಾವಿರ ಪ್ರಕರಣ ಇತ್ಯರ್ಥ ಪಡಿಸಲಾಗಿದೆ. ಈ ರೀತಿಯಾಗಿ ಎಲ್ಲಾ ಹಂತದಲ್ಲೂ ಪರಿಪಕ್ವತೆಯನ್ನು ತರುವ ಪ್ರಯತ್ನ ಮಾಡಲಾಗಿದೆ. ಪ್ರತಿ ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಯನ್ನು ಅರ್ಥಮಾಡಿಕೊಂಡು ಸ್ಥಳದಲ್ಲಿಯೇ ಪರಿಹಾರ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯನ್ನು ಜಾಗೃತಗೊಳಿಸಲಾಗಿದೆ, ಜನಪರ ಆಡಳಿತ ನೀಡುವ ಗುರಿ ನಮ್ಮದಾಗಿದೆ ಎಂದರು.
ಎಸಿ ಕೋರ್ಟ್‍ನಲ್ಲಿ ಕಳೆದ 8-10 ವರ್ಷಗಳಿಂದ ಇತ್ಯರ್ಥವಾಗದ 60 ಸಾವಿರಕ್ಕೂ ಅಧಿಕ ಪ್ರಕರಣಗಳು ಉಳಿದುಕೊಂಡಿವೆ. ಹಿಂದಿನವರು ನಿದ್ದೆ ಮಾಡುತ್ತಿದ್ದರೇ ಎಂದು ಅಸಮಾಧಾನ ವ್ಯಕ್ತಪಡಿಸಿದ ಕೃಷ್ಣ ಬೈರೇಗೌಡ, ನಾವು ಬಂದ ನಂತರ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಯನ್ನು ತಂದಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ಸಮಸ್ಯೆಗಳಿಗೆ ಸಂಪೂರ್ಣ ಮುಕ್ತಿ ನೀಡುವ ಪ್ರಯತ್ನ ನಡೆಯುತ್ತಿದೆ, ದಲ್ಲಾಳಿಗಳನ್ನು ನಿಯಂತ್ರಿಸಲಾಗುವುದು ಎಂದು ತಿಳಿಸಿದರು.