ಚೆಯ್ಯಂಡಾಣೆ ಫೆ.6 NEWS DESK : ಜಗತ್ತಿನ ಬದಲಾವಣೆಗೆ ಅನುಗುಣವಾಗಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕ ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಕಕ್ಕಬ್ಬೆ ಕುಂಜಿಲ ಗ್ರಾಮದ ಕೆ.ಪಿ ಬಾಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಿನ ಆಧುನಿಕ ಯುಗದಲ್ಲಿ ಡಿಜಿಟಲೀಕರಣ ಅತ್ಯವಶ್ಯಕ. ನಗರ ಪ್ರದೇಶಗಳಲ್ಲಿ ಡಿಜಿಟಲೀಕರಣಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಡಿಜಿಟಲ್ ಜಗತ್ತಿನಲ್ಲಿ ಸಾಧಕ ಬಾಧಕಗಳು ಕೂಡ ಇದೆ. ಅದರಲ್ಲಿ ಸಾಧಕಗಳನ್ನು ಆಯ್ಕೆಮಾಡಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳಿಂದ ಹರಡುವ ತಪ್ಪು ಮಾಹಿತಿಯನ್ನು ದೂರ ಇಟ್ಟು, ಒಳ್ಳೆಯದನ್ನು ಆಯ್ಕೆ ಮಾಡಿ ಉಪಯೋಗ ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಅವರ ಮುಂದಿನ ಭವಿಷ್ಯ ಉಜ್ವಲವಾಗಲು ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸಿ ಕೊಡಬೇಕಾಗಿದೆ.ಅದರಂತೆ ಇಲ್ಲಿನ ಶಾಲೆಯ ಮಕ್ಕಳಿಗೆ ಡಿಜಿಟಲೀಕರಣಕ್ಕೆ ಒತ್ತು ನೀಡಿರುವುದು ಶ್ಲಾಘನೀಯ ಎಂದ ಅವರು, ಮುಂದಿನ ದಿನಗಳಲ್ಲಿ ಇಲ್ಲಿನ ಮಕ್ಕಳು ಉನ್ನತ ಸ್ಥಾನವನ್ನು ಅಲಂಕರಿಸುವಂತ್ತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದಿಂದ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕಕ್ಕಬ್ಬೆ ಗ್ರಾ.ಪಂ ಅಧ್ಯಕ್ಷೆ ಶಿಲ್ಪಾ ಲೋಕೇಶ್, ಉಪಾಧ್ಯಕ್ಷೆ ಕಲಿಯಂಡ ಬೀನಾ, ಸದಸ್ಯರಾದ ಬಶೀರ್ ಪೊಯಕ್ಕರೆ, ಕುಂಡಂಡ ರಜಾಕ್, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷೆ ಸಫಿಯ, ಶಾಲೆಯ ಮುಖ್ಯಶಿಕ್ಷಕಿ. ಪಿ.ಕೆ.ಗಂಗಮ್ಮ, ಗ್ರಾ.ಪಂ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಮಾಜಿ ಸದಸ್ಯ ಬಚಾಮಂಡ ಲವ ಚಿಣ್ಣಪ್ಪ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ, ಕುಡಿಯರ ಮುತ್ತಪ್ಪ, ಶಾಲೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಾಲೆಯ ಶಿಕ್ಷಕ ವೃಂದ, ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಅಶ್ರಫ್