ಕುಶಾಲನಗರ, ಫೆ.6 NEWS DESK : ಶಿಕ್ಷಕರು ಮಕ್ಕಳಿಗೆ ಗಣಿತ ಕಲಿಕೆಯನ್ನು ಕಬ್ಬಿಣದ ಕಡಲೆ ಎಂಬ ಮನೋಭಾವನೆಯನ್ನು ದೂರಮಾಡಿ ಗಣಿತ ವಿಷಯವು ಸಂತಸದ ಕಲಿಕೆಯಾಗುವಂತೆ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಮೂಲಕ ಪ್ರಾಯೋಗಿಕವಾಗಿ ಗಣಿತ ಕಲಿಕೆಯ ಅಭ್ಯಾಸದ ಅಗತ್ಯವಿದೆ ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ಹೇಳಿದರು.
ಜಿಲ್ಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವತಿಯಿಂದ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ರಾಮನುಜನ್ ಗಣಿತ ಕ್ಲಬ್ ಸಹಯೋಗದೊಂದಿಗೆ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಸೋಮವಾರಪೇಟೆ ತಾಲ್ಲೂಕು ಪ್ರೌಢಶಾಲಾ ಗಣಿತ ಶಿಕ್ಷಕರಿಗೆ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು
ಏರ್ಪಡಿಸಿದ್ದ ಒಂದು ದಿನದ ಗಣಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಣಿತ ಅಭ್ಯಾಸವು ಮಕ್ಕಳಿಗೆ ಸಂತಸದ ಕಲಿಕೆಯಾದರೆ ಸುಲಭದ ಕಲಿಕೆಯಾಗುತ್ತದೆ ಎಂದರು. ಇಂತಹ ಕಾರ್ಯಕ್ರಮಗಳು ಗಣಿತ ಕ್ಲಿಷ್ಟವಾದ ವಿಷಯವಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಸುಲಭ ವಿಧಾನಗಳ ಮೂಲಕ ಗಣಿತ ಕಲಿತರೆ ಇದು ಇನ್ನಷ್ಟು ಸರಳವಾಗುತ್ತದೆ. ಶಿಕ್ಷಕರು ಸಹ ಸುಲಭ ವಿಧಾನಗಳ ಮೂಲಕ ಗಣಿತ ಬೋಧಿಸಬೇಕು. ಹೊಸ ಕೌಶಲ ಮತ್ತು ಕ್ರಿಯಾಶೀಲ ವಿಧಾನಗಳ ಮೂಲಕ ಕ್ಲಿಷ್ಟಕರ ವಿಚಾರಗಳನ್ನು ತಿಳಿಸಿಕೊಡಬೇಕು.
ಶಾಲೆಯ ಫಲಿತಾಂಶವು ಗಣಿತ ವಿಷಯದ ಫಲಿತಾಂಶವನ್ನು ಅವಲಂಬಿಸಿರುವುದರಿಂದ ಗಣಿತ ಶಿಕ್ಷಕರು ಮಕ್ಕಳಿಗೆ ಚಟುವಟಿಕೆಯಾಧಾರಿತ ಕಲಿಕೆಗೆ ಹೆಚ್ಚಿನ ಗಮನಹರಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಲು ಶಿಕ್ಷಕರು ಪರಸ್ಪರ ಸಮನ್ವಯತೆಯಿಂದ ಪೋಷಕರು ಹಾಗೂ ಸಮುದಾಯದ ಸಹಭಾಗಿತ್ವ ಹೊಂದಬೇಕು ಎಂದು ಬಿಇಓ ಭಾಗ್ಯಮ್ಮ ಹೇಳಿದರು.
ಗಣಿತ ಕಲಿಕೆಯ ತರಬೇತಿಯ ಮಹತ್ವ ಕುರಿತು ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ,
ಮಕ್ಕಳು ಗಣಿತ ಕಲಿಕೆಯು ಸುಲಭದ ಕಲಿಕೆ ಎಂಬ ಪರಿಕಲ್ಪನೆಯೊಂದಿಗೆ ಗಣಿತವನ್ನು ಕಲಿಯಬಲ್ಲೆ ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ನಿರಂತರ ಕಲಿಕೆಯಲ್ಲಿ ತೊಡಗಿದರೆ ಖಂಡಿತವಾಗಿಯೂ ಗಣಿತ ಕಲಿಕೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಗಣಿತ ಕ್ಲಬ್ ಮೂಲಕ ಶಿಕ್ಷಕರು ಮಕ್ಕಳಿಗೆ ಕ್ಲಿಷ್ಟ ಸಮಸ್ಯೆಗಳನ್ನು ಪರಿಹರಿಸಿದಾಗ ಮಕ್ಕಳಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿ, ಶಿಕ್ಷಕರು ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧಿಸಿದಾಗ ಮಕ್ಕಳಿಂದ ನಿರೀಕ್ಷಿತ ಫಲಿತಾಂಶ ಗಳಿಸಲು ಸಾಧ್ಯ. ಈ ದಿಸೆಯಲ್ಲಿ ಇಂತಹ ತರಬೇತಿಗಳು ಸಹಕಾರಿಯಾಗಿವೆ ಎಂದರು.
ಜಿಲ್ಲೆಯಲ್ಲಿ ಪ್ರೌಢಶಾಲಾ ಶಿಕ್ಷಕರು ಹೆಚ್ಚಿನ ಶ್ರಮ ವಹಿಸುತ್ತಿರುವುದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ಲಭಿಸುತ್ತಿದೆ ಎಂದರು.
ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಕರು ಮಕ್ಕಳಲ್ಲಿ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬೆಳವಾಡಿ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಎಂ.ಮೋಹನ್,
ದೃಖ್ ಶ್ರಾವ್ಯದ ವಿಡಿಯೋ ಹಾಗೂ ಪಿ.ಪಿ.ಟಿ.ಮೂಲಕ ಮಾಹಿತಿ ನೀಡಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಜಿ.ಎಂ.ಹೇಮಂತ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ
ಎ.ಎಂ.ಜವರಯ್ಯ, ಅಂಜೆಲಾ ವಿದ್ಯಾನಿಕೇತನ ಸಂಸ್ಥೆಯ ಮುಖ್ಯಸ್ಥೆ ವೀಣಾ ವಿಜಯ , ಎಸ್‌ಎಸ್‌ಎಲ್‌ಸಿ ಪರೀಕ್ಷಾ ತಾಲ್ಲೂಕು ನೋಡಲ್ ಅಧಿಕಾರಿ ಕೆ.ಬಿ.ರಾಧಾಕೃಷ್ಣ, ಸಿ ಆರ್ ಪಿ ಕೆ.ಶಾಂತಕುಮಾರ್, ಶಿಕ್ಷಣ ಸಂಯೋಜಕ ಎಚ್.ಆರ್.ಶೇಖರ್ ಇದ್ದರು.
ತರಬೇತಿಯಲ್ಲಿ ತಾಲ್ಲೂಕಿನ ಪ್ರೌಢಶಾಲಾ ಗಣಿತ ಶಿಕ್ಷಕರು ಭಾಗವಹಿಸಿದ್ದರು.