ವಿರಾಜಪೇಟೆ ಫೆ.7 NEWS DESK : ಬಾಳುಗೋಡು ಏಕಲವ್ಯ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು.
ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಬೆನ್ನಿ ಜೋಸೆಫ್ ಮಾತನಾಡಿ, ವಿಜ್ಞಾನವು ಪ್ರಸ್ತುತದಲ್ಲಿ ಮಹತ್ವದ ವಸ್ತು ವಿಷಯವಾಗಿದೆ. ಇದು ಮಕ್ಕಳಿಗೆ ಜ್ಞಾನವನ್ನು ಒದಗಿಸುವುದರ ಜೊತೆಗೆ ಅವರ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ರಾಷ್ಟ್ರವು ಮುಂದುವರೆಯಲು ವಿಜ್ಞಾನದ ಬೆಳವಣಿಗೆಯಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಇಂತಹ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಆಯೋಜಿಸುದರಿಂದ ಮಕ್ಕಳಲ್ಲಿ ಹೊಸ ಆವಿಸ್ಕಾರ, ಆಲೋಚನೆ ಮೂಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ದಿಲನ್, ವಿಜ್ಞಾನದ ಬಳಕೆಯು ಹೆಚ್ಚಿದಂತೆ ರಾಷ್ಟ್ರದ ತಂತ್ರಜ್ಞಾನ ಪ್ರಗತಿ ಶೀಘ್ರವಾಗಿ ಆಗುತ್ತದೆ. ಮಾತ್ರವಲ್ಲದೆ ರಾಷ್ಟ್ರದ ಪ್ರಗತಿಗೆ ಪೂರಕವಾಗಿದೆ ಎಂದರು.
ಈ ಸಂದರ್ಭ ಆಯೋಜಕ ಉಪನ್ಯಾಸಕರಾದ ರೇಷ್ಮಾ, ಬಿ.ಬಿ.ಸಚಿನ್ ಹಾಗೂ ಭರತ್ ಕುಮಾರ್, ಹರ್ಷಹಾಗೂ ಇತರ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಅಖಿತ ಹಾಗೂ ಸಂಗೀತ ಕಾರ್ಯಕ್ರಮವನ್ನು ನಿರೂಪಿಸಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಹಾಲಿನಲ್ಲಿರುವ ಕೆಸಿನ್ ಪ್ರಮಾಣ ಕಂಡು ಹಿಡಿಯುವ ಮಾದರಿ, ಭೂಕಂಪನ ಎಚ್ಚರಿಕೆ ಘಂಟೆ ಮಾದರಿ, ಕೊಳಚೆ ನೀರಿನ ಸಂಸ್ಕರಣೆ, ವಾಲ್ಕೆನೋ ಮಾದರಿ, ಸಾವಯವ ಕೃಷಿಯ ಮಾದರಿ ಮುಂತಾದ ಮಾದರಿಗಳನ್ನು ಪ್ರದರ್ಶಿಸಿದರು. ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ವಿಜ್ಞಾನ ರಸಪ್ರಶ್ನೆ, ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಜ್ಞಾಪಕ ಪರೀಕ್ಷೆ, ಪ್ರಬಂಧ ರಚನೆ ಸ್ಪರ್ಧೆಗಳನ್ನು ನಡೆಸಲಾಯಿತು.
ವಿಜೇತ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನವನ್ನು ವಿತರಿಸಿದರು.