ಚೆಯ್ಯಂಡಾಣೆ ಫೆ.8 NEWS DESK : ವಿರಾಜಪೇಟೆಯ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯಿದೆ, ಮಹಿಳಾ ಶೋಷಣೆ, ಮಾದಕ ದ್ರವ್ಯದ ಕುರಿತು ಅರಿವು ಕಾರ್ಯಕ್ರಮ ನಡೆಯಿತು.
ವಿರಾಜಪೇಟೆ ನಗರ ಪೋಲೀಸ್ ಠಾಣೆಯ ನಿರೀಕ್ಷಕ ಗಣಪತಿ ಹಾಗೂ ಮಹಿಳಾ ಪೊಲೀಸ್ ನಿರೀಕ್ಷರಾದ ಗೀತಾ ಮಾತನಾಡಿ, 18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು, ಕಿರುಕುಳ, ಅತ್ಯಾಚಾರಗಳಂತಹ ದುರ್ಘಟನೆಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟಲು, ಮಕ್ಕಳಿಗೆ ರಕ್ಷಣೆ, ಭದ್ರತೆ ಹಾಗೂ ನ್ಯಾಯ ಒದಗಿಸುವುದರ ಜತೆಗೆ ಅವರ ಆಸಕ್ತಿ ಮತ್ತು ಹಿತ ಕಾಪಾಡುವ ಉದ್ದೇಶದಿಂದ ‘ಪೋಕ್ಸೋ ಕಾಯಿದೆ-2012’ಯನ್ನು ಭಾರತ ಸರ್ಕಾರ ಜಾರಿಗೆ ತಂದಿದೆ ಎಂದರು.
ಸೈಬರ್ ಅಪರಾಧಗಳ ಬಗ್ಗೆ, ಬಾಲ್ಯ ವಿವಾಹ ನಿಷೇದ ಕಾಯ್ದೆಯ ಬಗ್ಗೆ ಮತ್ತು 18 ವರ್ಷದೊಳಗಿನ ಮಕ್ಕಳು ಯಾವುದೇ ವಾಹನಗಳನ್ನು ಚಾಲನೆ ಮಾಡಬಾರದೆಂದು, ಅಂತಹವರು ವಾಹನಗಳನ್ನು ಚಾಲನೆ ಮಾಡಿದ್ದಲ್ಲಿ ಕಾನೂನಿನಲ್ಲಿರುವ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭ ಬಾಲಕಿಯರ ನಿಲಯದ ಕರಾಟೆ ತರಬೇತುದಾರರಾದ ರೇಖಾ ಬೋಪ್ಪಣ್ಣ ಹಾಜರಿದ್ದರು. ವಾರ್ಡನ್ ಸುಮಯ್ಯ ಸ್ವಾಗತಿಸಿ, ವಂದಿಸಿದರು.
ವರದಿ : ಅಶ್ರಫ್