ಸೋಮವಾರಪೇಟೆ ಫೆ.8 NEWS DESK : ಶಾಂತಳ್ಳಿ ಪ್ರಥಮಿಕ ಆರೋಗ್ಯ ಕೇಂದ್ರದಲ್ಲಿ 13 ವರ್ಷಗಳಿಂದ “ಡಿ ಗ್ರೂಪ್ ನೌಕರರಾಗಿ” ಕಾರ್ಯನಿರ್ವಹಿಸುತ್ತಿರುವ ಚಂದ್ರಮ್ಮ ಅವರ ಉತ್ತಮ ಸೇವೆಯನ್ನು ಗುರುತಿಸಿ ಜೆಸಿಐ ಭಾರತದ ಕಾರ್ಯಕ್ರಮದಡಿಯಲ್ಲಿ ಜೆ ಸಿ ಐ ಸೋಮವಾರಪೇಟೆ ಪುಷ್ಪಗಿರಿ ಘಟಕದ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸೋಮವಾರಪೇಟೆ ತಜ್ಞ ವೈದ್ಯರಾದ ಡಾ. ಕಿರಣ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಶಾಂತಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಂದ್ರಮ್ಮ ಅವರಿಗೆ ಸನ್ಮಾನ ಮಾಡಿರುವುದು ತುಂಬಾ ಸಂತೋಷವಾಗಿದೆ ಎಂದರು.
ಗ್ರಾಮೀಣ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಜೆಸಿ ಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೀಗೆ ಗುರುತಿಸಿ ಸನ್ಮಾನ ಮಾಡುವುದರಿಂದ ಅವರಿಗೆ ಹೆಚ್ಚು ಕೆಲಸ ಮಾಡುವ ಹುಮ್ಮಸ್ಸು ಬರುತ್ತದೆ ಹಾಗೂ ಇತರೆ ಸಿಬ್ಬಂದಿ ವರ್ಗದವರಿಗೂ ಮಾದರಿಯಾಗಿರುತ್ತಾರೆ. ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಆದರೂ ಕೇವಲ ನಕರಾತ್ಮಕ ವಿಷಯಗಳಷ್ಟೇ ಜನರಿಗೆ ಕಾಣುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಸಮಾಜ ಗುರುತಿಸುವುದು ಕಡಿಮೆ. ಆದರೆ ಜೆಸಿ ಸಂಸ್ಥೆ ಇಂಥವರನ್ನು ಗುರುತಿಸುತ್ತಿರುವುದು ಶ್ಲಾಘನೀಯ. ಸಂಸ್ಥೆಯಿಂದ ಇನ್ನು ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ಆಗಲಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತನಾಡಿದ ಜೆಸಿ ಸೋಮವಾರಪೇಟೆ ಪುಷ್ಪಗಿರಿ ಘಟಕದ ಅಧ್ಯಕ್ಷ ಎಸ್.ಆರ್.ವಸಂತ್, ಸಮುದಾಯ ಅಭಿವೃದ್ಧಿ, ಸಮುದಾಯಗಳಲ್ಲಿ ಧನಾತ್ಮಕ ಮತ್ತು ಸಮರ್ಥನೆಯ ಪ್ರಭಾವವನ್ನು ಸೃಷ್ಟಿಸುವ ಗುರಿಯೊಂದಿಗೆ ಸ್ಥಳೀಯ ಸವಾಲುಗಳನ್ನು ಪರಿಹರಿಸುವ ಯೋಜನೆಗಳಲ್ಲಿ ಭಾಗವಹಿಸಲು ಜೆ ಸಿ ಐ ತನ್ನ ಸದಸ್ಯರನ್ನು ಪ್ರೋತ್ಸಾಹಿಸುತ್ತದೆ ಎಂದರು.
ಜೆ ಸಿ ಐ ವಿವಿಧ ತರಬೇತಿಯ ಕಾರ್ಯಕ್ರಮಗಳು, ಸಮ್ಮೇಳನಗಳು , ನೆಟ್ವರ್ಕಿಂಗ್ ಅವಕಾಶಗಳ ಮೂಲಕ ತಮ್ಮ ನಾಯಕತ್ವದ ಕೌಶಲ್ಯಗಳನ್ನು ಹೆಚ್ಚಿಸಲು ಯುವ ವ್ಯಕ್ತಿಗಳಿಗೆ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು.
ಸಮಾಜದಲ್ಲಿ ಯಾವುದೇ ಪ್ರಚಾರ ಬಯಸದೆ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವವರನ್ನು ಗುರುತಿಸಿ ಗೌರವಿಸುವುದು ನಮ್ಮ ಧ್ಯೇಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಚಾರುಮತಿ ಸಿ. ಆಚಾರ್ಯ, ಲೇಡಿ ಜೇಸಿ ಚೇರ್ ಪರ್ಸನ್ ವಿನುತಾ ಸುದೀಪ್, ಕಾರ್ಯದರ್ಶಿ ಜಗದಂಬ ಗುರುಪ್ರಸಾದ್, ವಲಯ ಕಾರ್ಯದರ್ಶಿ ಮಾಯಾ ಗಿರೀಶ್, ನಿಕಟ ಪೂರ್ವ ವಲಯ ಅಧಿಕಾರಿ ವಿದ್ಯಾ ಸೋಮೇಶ್, ಖಜಾಂಚಿ ಜೆಸಿ ಪುಷ್ಪಕ್, ಜೆಸಿ ಮನೋಹರ್ ಗ್ರಾ.ಪಂ ಅಧ್ಯಕ್ಷೆ ಸವಿತಾ ಹಾಗೂ ಪಂಚಾಯತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಜೆಸಿ ಸದಸ್ಯರು ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಇದ್ದರು.