ಮಡಿಕೇರಿ ಫೆ.12 NEWS DESK : ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಇಂದು ಕರೆದಿದ್ದ ನಗರಸಭೆಯ ವಿಶೇಷ ಸಭೆಗೆ ಸರ್ವ ಸದಸ್ಯರು ಗೈರು ಹಾಜರಾಗುವ ಮೂಲಕ ಆಡಳಿತ ವೈಖರಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಆಡಳಿತ ಪಕ್ಷ ಬಿಜೆಪಿಯ 16 ಸದಸ್ಯರಲ್ಲಿ 13 ಸದಸ್ಯರು ಗೈರು ಹಾಜರಾಗುವುದರೊಂದಿಗೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಸಭೆ ಇಂದು ಮಧ್ಯಾಹ್ನ 3.30 ಗಂಟೆಗೆ ನಿಗಧಿಯಾಗಿತ್ತು, ಆದರೆ ಯಾವ ಸದಸ್ಯರು ಕೂಡ ಸಭಾಂಗಣಕ್ಕೆ ಆಗಮಿಸಿರಲಿಲ್ಲ. ಈ ಕುರಿತು ಕೆಲವು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದಾಗ ಪೌರಾಯುಕ್ತರನ್ನು ವರ್ಗಾವಣೆ ಮಾಡಬೇಕೆಂದು ಹಿಂದಿನ ಸಭೆಗಳಲ್ಲಿ ನಿರ್ಣಯವಾಗಿದೆ, ಆದರೆ ವರ್ಗಾವಣೆಯ ಬಗ್ಗೆ ಕಾಳಜಿ ತೋರುತ್ತಿಲ್ಲ. ಅದೇ ಪೌರಾಯುಕ್ತರನ್ನು ಕೂರಿಸಿಕೊಂಡು ಸಭೆ ನಡೆಸುವುದು ಎಷ್ಟು ಸರಿ, ಅಲ್ಲದೆ ಇತ್ತೀಚೆಗೆ ನಡೆದ ಜಿಲ್ಲಾ ಬಿಜೆಪಿಯ ನೂತನ ಪದಾಧಿಕಾರಿಗಳ ಆಯ್ಕೆಯ ವಿಚಾರದಲ್ಲೂ ನಮಗೆ ಅಸಮಾಧಾನವಿದೆ. ಆದ್ದರಿಂದ ಉಪಾಧ್ಯಕ್ಷರಾದಿಯಾಗಿ ನಾವೆಲ್ಲರು ಸಭೆಯನ್ನು ಬಹಿಷ್ಕರಿಸಿದ್ದೇವೆ ಎನ್ನುವ ಪ್ರತಿಕ್ರಿಯೆ ಕೇಳಿ ಬಂತು.
::: ಪೌರಾಯುಕ್ತರ ವರ್ಗಾವಣೆಯಾಗಲಿ :::
ವಿರೋಧ ಪಕ್ಷ ಎಸ್‌ಡಿಪಿಐ ಸದಸ್ಯ ಎಂ.ಕೆ.ಮನ್ಸೂರ್ ಅಲಿ ಮಾತನಾಡಿ ಪೌರಾಯುಕ್ತರನ್ನು ವರ್ಗಾವಣೆ ಮಾಡಬೇಕೆಂದು ಈಗಾಗಲೇ ಹಿಂದಿನ ಸಭೆಯಲ್ಲಿ ನಿರ್ಣಯವಾಗಿದೆ, ಪೌರಾಯುಕ್ತರ ಕಾರ್ಯವೈಖರಿ ಸರಿ ಇಲ್ಲ ಎಂದ ಮೇಲೆ ಅವರ ಉಪಸ್ಥಿತಿಯಲ್ಲಿ ವಿಶೇಷ ಸಭೆ ನಡೆಸುವುದು ಎಷ್ಟು ಸರಿ, ಇದಕ್ಕೆ ನಮ್ಮ ಆಕ್ಷೇಪವಿದೆ, ಆದ್ದರಿಂದ ಸಭೆಗೆ ಹಾಜರಾಗಿಲ್ಲ ಎಂದರು.
::: ಸಭೆ ಮುಂದೂಡಿದ್ದೇನೆ :::
ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರು, ನಾನೇ ಸಭೆಯನ್ನು ಕಾರಣಾಂತರಗಳಿAದ ಮುಂದೂಡಿದ್ದೇನೆ, ಇಂದಿನ ಸಭೆ 3.30 ಗಂಟೆಗೆ ನಡೆಯಬೇಕಾಗಿತ್ತು, ನಾನು ಇದಕ್ಕೂ ಮೊದಲೇ ಸಭೆಯನ್ನು ಮುಂದೂಡಿ ನೋಟೀಸ್ ಬೋರ್ಡ್ನಲ್ಲಿ ಹಾಕಿದ್ದೇನೆ ಎಂದರು.
::: ನಮ್ಮ ಗಮನಕ್ಕೆ ಬಂದಿಲ್ಲ :::
ಸಭೆ ಮುಂದೂಡಿರುವುದು ಅಥವಾ ನೋಟಿಸ್ ಬೋರ್ಡ್ನಲ್ಲಿ ಹಾಕಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಕೆಲವು ಸದಸ್ಯರು ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಸ್ವತ: ಆಡಳಿತ ಪಕ್ಷ ಬಿಜೆಪಿ ಸದಸ್ಯರೇ ತಾವು ಆಯ್ಕೆ ಮಾಡಿದ ಅಧ್ಯಕ್ಷರು ಕರೆದ ವಿಶೇಷ ಸಭೆಗೆ ಗೈರು ಹಾಜರಾಗುವ ಮೂಲಕ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದಾರೆ. ಜಿಲ್ಲಾ ಬಿಜೆಪಿಯ ನೂತನ ಪದಾಧಿಕಾರಿಗಳ ಆಯ್ಕೆಯ ನಂತರದ ಬೆಳವಣಿಗೆ ಪಕ್ಷದ ಮುಖಂಡರುಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.