ಮಡಿಕೇರಿ ಫೆ.13 NEWS DESK : ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಫೆ.16 ರಂದು ಕೊಡಗು ಜಿಲ್ಲೆಯ 4 ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಕೊಡಗಿನ ಕುಶಾಲನಗರ, ವಿರಾಜಪೇಟೆ, ಪೊನ್ನಂಪೇಟೆ ಹಾಗೂ ಮಡಿಕೇರಿ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಎ.ಭರತ್ ಮಾತನಾಡಿ, ಕೇಂದ್ರ ಬಜೆಟ್ ನಲ್ಲಿ ಕಾರ್ಮಿಕರು ಹಾಗೂ ರೈತರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಕೇಂದ್ರ ಸರ್ಕಾರ ಮತೀಯ ನೀತಿಗಳಿಗೆ ಆದ್ಯತೆ ನೀಡುತ್ತಿದೆ ಹೊರತು ಜ್ವಲಂತ ಸಮಸ್ಯೆಗಳ ನಿವಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಬಂಡವಾಳಶಾಹಿಗಳು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ, ಕೇಂದ್ರ ಸರ್ಕಾರದ ನೀತಿಗಳು ಬಡವರ ದೇಶ ಮತ್ತು ಶ್ರೀಮಂತರ ದೇಶ ಎಂದು ಇಬ್ಬಾಗ ಮಾಡಿದೆ. ರಾಜ್ಯ ಸರ್ಕಾರಕ್ಕೆ ಕೊಡುವ ಅನುದಾನ ಕಡಿತ ಮಾಡಲಾಗುತ್ತಿದೆ. ಅಸಂಘಟಿತ ವರ್ಗವಾದ ಕಾರ್ಮಿಕರ ಬದುಕು ತೀರಾ ಅಸಹನೀಯವಾಗಿದೆ ಎಂದು ಟೀಕಿಸಿದರು.
ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ 2 ಕೋಟಿ ಸಹಿ ಸಂಗ್ರಹ ಮಾಡಿ ಪ್ರಧಾನಿಯವರಿಗೆ ಕಳುಹಿಸುವ ಅಭಿಯಾನ ನಡೆಸಲಾಗುವುದು ಎಂದರು.
ಸಂಘಟನೆಯ ಕಾರ್ಯಕಾರಿ ಮಂಡಳಿ ಸದಸ್ಯೆ ಜಾನಕಿ ಹಾಗೂ ಜಿಲ್ಲಾ ಸಮಿತಿ ಸದಸ್ಯ ದಿನೇಶ್ ಉಪಸ್ಥಿತರಿದ್ದರು.










