ಮಡಿಕೇರಿ ಫೆ.13 NEWS DESK : ಕೊಡಗಿನ ಅತ್ಯಂತ ಎತ್ತರದ ಬೆಟ್ಟಗಳ ಪೈಕಿ ಮೂರನೇ ಸ್ಥಾನದ ಬೆಟ್ಟ, ಕೋಟೆ ಬೆಟ್ಟ.
ದ್ವಾಪರ ಯುಗದಲ್ಲಿ ಪಾಂಡವರ ಅಜ್ಞಾತವಾಸ ಕಾಲದಲ್ಲಿ ಇಲ್ಲಿನ ಕಲ್ಲಿನ ಈಶ್ವರ (ಬೊಟ್ಲಪ್ಪ)ದೇವಾಲಯವನ್ನು ಪಾಂಡವರೇ ಕಟ್ಟಿದರೆಂದು ಪ್ರತೀತಿ. ಅಷ್ಟು ಎತ್ತರದಲ್ಲೂ ಎರಡು ಕೆರೆಗಳು ಬೇಸಿಗೆಯಲ್ಲೂ ನೀರಿನಿಂದ ತುಂಬಿರುವುದು ವಿಶೇಷ.
ದೇವಾಲಯದ ಕಲ್ಲಿನ ಗೋಡೆಯ ಮೇಲೆ ಮತ್ಸ್ಯ ಚಿಹ್ನೆ ಇದ್ದು, ಕೊಡಗು ಹಿಂದೆ ಮತ್ಸ್ಯದೇಶ ವಾಗಿತ್ತು ಎನ್ನುವ ನಂಬಿಕೆಗೆ ಇಂಬು ಕೊಡುತ್ತದೆ. ಪಾಂಡವರು ರಾತ್ರಿ ಬೆಳಗಾಗುವುದರೊಳಗೆ ಈ ದೇವಾಲಯವನ್ನು ನಿರ್ಮಿಸಿದರೆಂದೂ, ದೇವಾಲಯಕ್ಕೆ ಬಾಗಿಲು ಮಾಡಬೇಕೆಂದಿರುವಾಗ ಬೆಳಗಾಗಿದ್ದರಿಂದ ಬಾಗಿಲು ಮಾಡಲಿಲ್ಲ ಎಂದೂ ಹಿರಿಯರ ಅಂಬೋಣ. ಮುಕ್ಕೋಡ್ಲು ಗ್ರಾಮಸ್ಥರು ಈ ದೇವಾಲಯದಲ್ಲಿ ಹಬ್ಬ ಮತ್ತು ಪೂಜಾದಿಗಳನ್ನು ನಡೆಸುತ್ತಾರೆ. ಈ ಬೆಟ್ಟದ ಇನ್ನೊಂದು ಪಾರ್ಶ್ವದಲ್ಲಿ ಒಂದು ಗುಹಾ ದೇವಾಲಯ ಇದ್ದು ಗರ್ವಾಲೆ ಗ್ರಾಮಸ್ಥರು ಪೂಜಾದಿಗಳನ್ನು ನಡೆಸುತ್ತಾರೆ.
ಪ್ರವಾಸಿ ಮಿತ್ರರೇ,
ನೀವು ಇಲ್ಲಿಗೆ ಭಕ್ತಾದಿಗಳಾಗಿ ಬಂದರೆ ಒಳ್ಳೆಯದು. ಈ ಭಾಗದ ಜನರ ನಂಬಿಕೆಯ ತಾಣ ಇದಾಗಿದ್ದು, ಇಲ್ಲಿ ಮೋಜು ಮಸ್ತಿ ಬೇಡ.
ನಿಮ್ಮೂರಿನಿಂದ ತಂದ ಬಾಟಲಿ, ಪ್ಲಾಸ್ಟಿಕ್ ಕಸಗಳನ್ನು ಇಲ್ಲಿ ಎಸೆಯಬೇಡಿ. ಇದು ಜೀವ ವೈವಿಧ್ಯ ತಾಣವೂ ಆಗಿರುವುದರಿಂದ ಪ್ರಕೃತಿಯ ಸಮತೋಲನವನ್ನು ಕೂಡಾ ಕಾಯ್ದುಕೊಳ್ಳಬೇಕಾಗಿದೆ.
ಬನ್ನಿ, ನೋಡಿ, ಆನಂದಿಸಿ. ಆದರೆ….ಕಸದ ಕೊಂಪೆಯನ್ನಾಗಿಸಬೇಡಿ. ಪ್ರಜ್ಞಾವಂತ ನಾಗರಿಕರು ಈ ಪ್ರಕೃತಿಯನ್ನು ನಿಮ್ಮ ತಾಯಿಯಂತೆ ಪ್ರೀತಿಸಿರಿ, ಗೌರವಿಸಿರಿ!! >>>(ನಾಗೇಶ್ ಕಾಲೂರು)<<<