ಮಡಿಕೇರಿ ಫೆ.14 : ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಸಂಘಟನೆಯ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಎಐಡಿಎಸ್‌ಒ ಸಂಘಟನೆಯ ಜಿಲ್ಲಾ ಸಂಚಾಲಕ ಸುಭಾಷ್, ರಾಜ್ಯ ಬಜೆಟ್ ಮಂಡನೆ ಸಂದರ್ಭ ಸರ್ಕಾರ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ನಿವಾರಣೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಬಡ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ನೆರವಾಗಬಲ್ಲ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ತಿಳಿಸಿದ್ದಾರೆ.
::: ಬೇಡಿಕೆಗಳು :::
ಕಳೆದ ಸರ್ಕಾರ ರಾಜ್ಯದಲ್ಲಿ ಹೇರಿದ ಎನ್‌ಇಪಿ-2020 ರ ನಿಯಮದ ಎಲ್ಲಾ ಶಿಫಾರಸ್ಸುಗಳನ್ನು ಹಿಂಪಡೆಯಬೇಕು. ಕಟ್ಟಡ ಕಾರ್ಮಿಕರ ಮಕ್ಕಳ ಶಿಷ್ಯ ವೇತನ ಹಿಂದಿನ ಮೊತ್ತವನ್ನೇ ಮುಂದುವರೆಸಬೇಕು. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಹಣವನ್ನು ಅವರ ಬ್ಯಾಂಕ್ ಖಾತೆಗೆ ಹಾಕುವ ಪದ್ಧತಿಯನ್ನು ಹಿಂಪಡೆಯಬೇಕು. ರಾಜ್ಯದ ಸರ್ಕಾರಿ ಇಂಜಿನಿಯರಿAಗ್ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ವಿವಿಗಳಲ್ಲಿ, ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕ ಹಾಗೂ ಭೋದಕೇತರ ಸಿಬ್ಬಂದಿಗಳ ಖಾಲಿ ಇರುವ ಹುದ್ದೆಗಳು ಮತ್ತು ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಬೇಕು. ಅಂಗನವಾಡಿಗಳ ನಿರ್ವಹಣೆಗೆ ಅನುದಾನ ಹೆಚ್ಚಿಸಬೇಕು ಹಾಗೂ ಈ ಬಾರಿಯ ಬಜೆಟ್ ನಲ್ಲಿ ಯಾವುದೇ ನೂತನ ಸ್ವ – ಹಣಕಾಸು ಶಿಕ್ಷಣ ಸಂಸ್ಥೆಗಳನ್ನು ಘೋಷಿಸಬಾರದು ಎಂದು ಸುಭಾಷ್ ಒತ್ತಾಯಿಸಿದ್ದಾರೆ.









