ಮಡಿಕೇರಿ ಫೆ.14 NEWS DESK : ವಾಹನಗಳಿಗೆ ಹೆಚ್‍ಎಸ್‍ಆರ್‍ಪಿ ಅಳವಡಿಸಲು ನಿಗಧಿ ಪಡಿಸಿದ ಶುಲ್ಕ ಕಡಿತಗೊಳಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಯೂನಿಯನ್ ನ ಪದಾಧಿಕಾರಿಗಳು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಆದೇಶದಂತೆ ವಾಹನಗಳಿಗೆ ಗರಿಷ್ಠ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ರಾಜ್ಯದಲ್ಲಿ ಹೆಚ್‍ಎಸ್‍ಆರ್‍ಪಿ ಅಳವಡಿಸಲು ಶುಲ್ಕ ನಿಗಧಿಪಡಿಸಲಾಗಿದೆ. ಇದು ಆಟೋರಿಕ್ಷಾ, ಟ್ಯಾಕ್ಸಿ ಮತ್ತಿತರ ವಾಹನಗಳ ಚಾಲಕ, ಮಾಲೀಕರಿಗೆ ಹೊರೆಯಾಗಲಿದೆ ಎಂದರು.
ಚಾಲಕರ ಒಂದು ದಿನದ ಗಳಿಕೆಯ ಹಣ ಇದಕ್ಕಾಗಿ ವ್ಯಯ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ದಿನ ಬಳಕೆಯ ಅಗತ್ಯ ವಸ್ತುಗಳ ದುಬಾರಿ ಬೆಲೆಯ ಹೊರೆಯೊಂದಿಗೆ ಹೆಚ್‍ಎಸ್‍ಆರ್‍ಪಿಗಾಗಿ ಹಣ ವ್ಯಯ ಮಾಡಲು ಶ್ರಮಿಕ ವರ್ಗದ ಚಾಲಕರಿಗೆ ಅಸಾಧ್ಯವಾಗಲಿದೆ ಎಂದು ಗಮನ ಸೆಳೆದರು.
ಹೆಚ್‍ಎಸ್‍ಆರ್‍ಪಿ ಬಗ್ಗೆ ಸಾಕಷ್ಟು ಮಾಹಿತಿಯ ಕೊರತೆ ಇರುವುದರಿಂದ ಜಾಗೃತಿ ಮೂಡಿಸುವ ಅಗತ್ಯವಿದೆ. ಈಗ ನೀಡಿರುವ ಅವಧಿಯನ್ನು ಮತ್ತಷ್ಟು ವಿಸ್ತರಿಸಬೇಕು ಮತ್ತು ಅಲ್ಪ ಆದಾಯದ ಚಾಲಕರ ಹಿತದೃಷ್ಟಿಯಿಂದ ಶುಲ್ಕ ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಸುವ ಸಂದರ್ಭ ಯೂನಿಯನ್ ನ ಜಿಲ್ಲಾಧ್ಯಕ್ಷ ಕೆ.ಹೆಚ್.ಅಣ್ಣ ಶರೀಫ್, ಪ್ರಧಾನ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್ ಹಾಗೂ ಕೋಶಾಧಿಕಾರಿ ಕೆ.ಎಂ.ಯೂಸೂಫ್ ಹಾಜರಿದ್ದರು.









