ಮಡಿಕೇರಿ ಫೆ.15 NEWS DESK : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿಎಸ್‍ಟಿ ಸೇರಿದಂತೆ ವಿವಿಧ ತಂಡಗಳಿಗೆ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದ್ದಾರೆ.
ನಗರದ ಜಿ.ಪಂ.ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಪಾಲಿಸುವ ಬಗ್ಗೆ ನಡೆದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ವಿವಿಧ ತಂಡದ ಅಧಿಕಾರಿಗಳು ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಈಗಿನಿಂದಲೇ ಸಿದ್ಧ್ದತೆ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯ ವ್ಯಾಪ್ತಿಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದರು.
ಲೋಕಸಭಾ ಚುನಾವಣೆ ಘೋಷಣೆಯಾದ ಕೂಡಲೇ ಸರ್ಕಾರಿ ಕಟ್ಟಡಗಳು, ಸಾರ್ವಜನಿಕ ಸ್ಥಳಗಳು ಸೇರಿದಂತೆ ವಿವಿಧೆಡೆ ಅಳವಡಿಸಲಾಗಿರುವ ಜಾಹೀರಾತು, ಪ್ರಕಟಣೆ, ಬ್ಯಾನರ್‍ಗಳನ್ನು ತೆರವುಗೊಳಿಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಚುನಾವಣಾ ಆಯೋಗದ ನಿರ್ದೇಶನವನ್ನು ಅಧಿಕಾರಿಗಳು ಪಾಲಿಸಬೇಕು. ಸಂಶಯಕ್ಕೆ ಅವಕಾಶ ಮಾಡಬಾರದು. ಮಾಹಿತಿ ತಿಳಿಯದಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅವರು ಸಲಹೆ ಮಾಡಿದರು.
ಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆ ತಮಗೆ ನಿಯೋಜಿಸಿರುವ ಕ್ಷೇತ್ರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆ ಮಾಡಬೇಕು. ಹಣ, ಮದ್ಯ ಸಿಕ್ಕಿಬಿದ್ದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಜರುಗಿಸಬೇಕು. ಸಿ-ವಿಜಿಲ್ ಆ್ಯಪ್ ಮೂಲಕ ಮಾಹಿತಿ ದೊರೆಯಲಿದ್ದು, ಯಾರೂ ಸಹ ತಡ ಮಾಡದೆ ಆಯಾಯ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ವಿಭಾಗಕ್ಕೆ ಮಾಹಿತಿ ನೀಡಬೇಕು ಎಂದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಗಮನಹರಿಸಬೇಕು. ಮುಕ್ತ, ಶಾಂತಿಯುತ ಹಾಗೂ ನಿರ್ಭೀತಿಯಿಂದ ಚುನಾವಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಚುನಾವಣೆಗೆ ನಿಯೋಜಿಸಿರುವ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಪೊಲೀಸರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕೊಡಗು ಜಿಲ್ಲೆಯಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದ್ದು, ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿದಲ್ಲಿ ಸುಗಮವಾಗಿ ಚುನಾವಣೆ ನಡೆಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಉಲ್ಲಂಘಿಸಿದಲ್ಲಿ ದಂಡವನ್ನು ನಿಯಮಾನುಸಾರ ವಿಧಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾತನಾಡಿ, ರಾಜಕೀಯ ಪಕ್ಷವಾಗಲೀ, ಅಭ್ಯರ್ಥಿಗಳಾಗಲೀ ಜಾತಿ, ಸಮುದಾಯ, ಧರ್ಮ ಹಾಗೂ ಭಾಷೆಯನ್ನು ಸೇರಿದಂತೆ ಪರಸ್ಪರ ವೈಮನಸ್ಸು ಮೂಡಿಸುವಂತಹ ಚಟುವಟಿಕೆಗಳಲ್ಲಿ ತೊಡಗಬಾರದು, ಈ ಬಗ್ಗೆ ಚುನಾವಣೆಗೆ ನಿಯೋಜಿಸಿರುವ ಅಧಿಕಾರಿಗಳು ಗಮನಹರಿಸಬೇಕು ಎಂದರು.
ದೇವಾಲಯ, ಮಸೀದಿ, ಚರ್ಚ್‍ಗಳಂತಹ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರ ಕಾರ್ಯಕ್ಕೆ ವೇದಿಕೆಯನ್ನಾಗಿ ಬಳಸಬಾರದು, ಈ ಬಗ್ಗೆ ಅಧಿüಕಾರಿಗಳು ಎಚ್ಚರವಹಿಸಬೇಕು ಎಂದು ಬಿಎನ್.ವೀಣಾ ತಿಳಿಸಿದರು.
ಮತದಾರರಿಗೆ ಆಮಿಷ ಮಾಡಬಾರದು. ಮತಗಟ್ಟೆ ವ್ಯಾಪ್ತಿಯ 100 ಮೀಟರ್ ಒಳಗಡೆ ಪ್ರಚಾರ ಮಾಡಬಾರದು. ಚುನಾವಣೆ ಘೋಷಣೆಯಾಗುವುದಕ್ಕೆ ಮುಂಚಿನ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಬಹುದಾಗಿದೆ. ಚುನಾವಣಾ ಪ್ರಚಾರ ಕೈಗೊಳ್ಳುವ ಬಗ್ಗೆ ಸ್ಥಳ ಮತ್ತು ಸಮಯದ ಬಗ್ಗೆ ಸ್ಥಳೀಯ ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅನುಮತಿ ಪಡೆಯಬೇಕು. ಮೆರವಣಿಗೆಗೆ ಅನುಮತಿ ಪಡೆಯಬೇಕು. ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಧ್ವನಿವರ್ಧಕ ಬಳಸಲು ಅನುಮತಿ ಪಡೆಯುವುದು, ಮೆರವಣಿಗೆ ಸಂದರ್ಭದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟುಮಾಡಬಾರದು. ಹೀಗೆ ಮಾದರಿ ನೀತಿ ಸಂಹಿತೆ ಪಾಲಿಸುವಂತಾಗಬೇಕು ಎಂದರು.
ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿಎಸ್‍ಟಿ ಸೇರಿದಂತೆ ವಿವಿಧ ತಂಡಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.









