ಸೋಮವಾರಪೇಟೆ ಫೆ.15 NEWS DESK : ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿ.ಸಿ. ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಬೇಕು. ಬಯೋ ಮೆಟ್ರಿಕ್ ಅಳವಡಿಸಿ, ಬೆಳಿಗ್ಗೆ 9-45ರೊಳಗೆ ಕಚೇರಿಗೆ ಆಗಮಿಸಿ ತಂಬ್ ನೀಡಬೇಕು ಎಂದು ಲೋಕಾಯುಕ್ತ ಉಪಅಧೀಕ್ಷಕ ಎಂ.ಎಸ್.ಪವನ್‍ಕುಮಾರ್ ಸೂಚಿಸಿದರು.
ಕರ್ನಾಟಕ ಲೋಕಾಯುಕ್ತ ಮಡಿಕೇರಿಯ ಅಧಿಕಾರಿಗಳು ಇಲ್ಲಿನ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿ ಸ್ವೀಕಾರ ಮತ್ತು ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳ ವಿಳಂಬ ಹಾಗು ಇನ್ನಿತರ ತೊಂದರೆ ನೀಡುತ್ತಿರುವ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪತ್ರದಲ್ಲಿ ನೀಡಬಹುದು. ಸಾರ್ವಜನಿಕರು ತಮ್ಮ ಸಮಸ್ಯೆಗೆ ಸಂಬಂಧಿಸಿದಂತೆ ಯಾವುದೇ ದೂರು ನೀಡುವಾಗಲೂ ಒಂದು ಹಿಂಬರಹ ಪಡೆದಲ್ಲಿ ಅರ್ಜಿದಾರರ ಸಮಸ್ಯೆ ತಿಳಿಯಬಹುದು ಎಂದರು.
ಸಾರ್ವಜನಿಕರು ಯಾವುದೇ ಅಧಿಕಾರಿಗಳಿಂದ ಸಮಸ್ಯೆಗೊಳಪಟ್ಟಲ್ಲಿ ತಮ್ಮ ಸಮಸ್ಯೆಗೆ ಸಂಬಂಧಿಸಿದಂತೆ, ಅರ್ಜಿ ಭರ್ತಿ ಮಾಡಿ, ನೋಟರಿಯಿಂದ ಅಫಿಡೆವಿಟ್ ಮಾಡಿಸಿದ ಅರ್ಜಿಗಳನ್ನು ದೂರಿನೊಂದಿಗೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.08272-295297 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ತಾಲೂಕಿನ ಬೀಕಳ್ಳಿ ಗ್ರಾಮದ ಬಿ.ಆರ್. ಮಂಜುನಾಥ್ ಕಂದಾಯ ಇಲಾಖೆಗೆ ಕಳೆದ ನಾಲ್ಕು ವರ್ಷಗಳಿಂದ ಅರ್ಜಿಯೊಂದಿಗೆ ವಂಶ ವೃಕ್ಷಕ್ಕೆ ಬೇಕಾದ ಎಲ್ಲ ದಾಖಲಾತಿಗಳನ್ನು ಸೇರಿಸಿ ವಂಶವೃಕ್ಷಕ್ಕೆ ಅರ್ಜಿ ಸಲ್ಲಿಸುತ್ತಿದ್ದರೂ, ಸಕಾರಣ ಇಲ್ಲದೆ, ಅರ್ಜಿಯನ್ನು ತಿರಸ್ಕರಿಸುತ್ತಿದ್ದಾರೆ ಎಂದು ಹೇಳಿದರು. ಕೂಡಲೇ ದಾಖಲಾತಿಯನ್ನು ಪರಿಶೀಲಿಸಿ ವಂಶವೃಕ್ಷ ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಉಪ ಅಧೀಕ್ಷಕರು ಸೂಚಿಸಿದರು.
ತಾಲ್ಲೂಕಿನ ಇಗ್ಗೋಡ್ಲು ಗ್ರಾಮದಲ್ಲಿ ಕೃಷಿ ಭೂಮಿಯ ದುರಸ್ತಿ ಮಾಡಿಕೊಡದ ಬಗ್ಗೆ ಮಾದಪ್ಪ ದೂರಿಕೊಂಡರು. ಆಲೂರು ಸಿದ್ಧಾಪುರದ ಎಚ್.ಕೆ. ಕಾವೇರಮ್ಮ ದಾರಿಯನ್ನು ಮುಚ್ಚಿರುವ ಬಗ್ಗೆ, ಶಿರಂಗಾಲದ ಪಿ.ಈ ತಿಮ್ಮಯ್ಯ 2021ರಲ್ಲಿ ಕಂದಾಯ ನಿಗಧಿಗೆ ಅರ್ಜಿ ಸಲ್ಲಿಸಿದ್ದು, ಯಾವ ಹಂತದಲ್ಲಿದೆ ಎಂದು ಮಾಹಿತಿ ನೀಡುವ ಬಗ್ಗೆ ದೂರು ನೀಡಿದ್ದಾರೆ. ಗ್ರಾಹಕರ ರಕ್ಷಣಾ ವೇದಿಕೆಯ ಸುಬ್ರಮಣಿ, ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಸಿಸಿ ಕ್ಯಾಮೆರಾ ಇರುವುದಿಲ್ಲ, ಯಾವುದೇ ಕಚೇರಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ ಮಾಡಿಲ್ಲ ಎಂದು ದೂರಿಕೊಂಡರು. ಬಾಗೂರು ಗ್ರಾಮದ ಕಾವೇರಮ್ಮ, 1987ರಲ್ಲಿ ಮಂಜೂರಾದ ಕೃಷಿ ಭೂಮಿಯನ್ನು ಬೇರೆಯವರಿಗೆ ಮತ್ತೆ ಮಂಜೂರು ಮಾಡಿದ್ದು, ಬಿಡಿಸಿಕೊಡುವಂತೆ ಮನವಿ ಮಾಡಿದರು. ಹರಗ ಗ್ರಾಮದ ಎಚ್.ಕೆ. ಗಿರೀಶ್ ಶಾಂತಳ್ಳಿ ಕಂದಾಯ ಇಲಾಖೆಯ ಅಧಿಕಾರಿಗಳು ರಸ್ತೆಯನ್ನು ಬಿಡಿಸಿಕೊಡುವ ನೆಪದಲ್ಲಿ ಸ್ಮಶಾನ ಜಾಗವನ್ನು ಬೇರೆ ಸ್ಥಳದಲ್ಲಿ ಗುರುತಿಸಿ ನೀಡಿರುವ ಬಗ್ಗೆ ದೂರು ನೀಡಿದರು. ಸಭೆಯಲ್ಲಿ ತಹಸೀಲ್ದಾರ್ ವಿ.ಎಸ್.ನವೀನ್‍ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.









