ಮಡಿಕೇರಿ ಫೆ.16 NEWS DESK : ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿನ ಮೂಲ ಸೌಲಭ್ಯಗಳಿಗಾಗಿ ಹೆಚ್ಚಿನ ಅನುದಾನ ಮೀಸಲಿಡುವುದು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸಿ.ಇ.ಟಿ ಹಾಗೂ ನೀಟ್ ತರಬೇತಿ ನೀಡುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುವುದಾಗಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಸಂಘಟನೆಯ ಕೊಡಗು ಜಿಲ್ಲಾ ಸಂಚಾಲಕ ಸುಭಾಷ್ ತಿಳಿಸಿದ್ದಾರೆ.
ಆದರೆ ಪ್ರತಿ ವರ್ಷ ಬಜೆಟ್ ನ ಶೇ.30 ನ್ನು ಶಿಕ್ಷಣಕ್ಕೆ ನೀಡಬೇಕೆಂಬ ಜನಸಾಮಾನ್ಯರ, ವಿದ್ಯಾರ್ಥಿಗಳ ಒಕ್ಕೊರಲಿನ ಬೇಡಿಕೆಯನ್ನು ಕಡೆಗಣಿಸಿ ಶೇ.11.9 ಮಾತ್ರವೇ ನೀಡಿರುವುದು ನಿರಾಶಾದಾಯಕ ಬೆಳವಣಿಗೆ ಎಂದು ಟೀಕಿಸಿದ್ದಾರೆ.
ಸರ್ಕಾರಿ ಶಾಲಾ, ಕಾಲೇಜುಗಳನ್ನು ಅಭಿವೃದ್ಧಿ ಪಡಿಸಬೇಕೆಂಬ ಮಾತು ಬಜೆಟ್ ನಲ್ಲಿ ಕೇಳಿ ಬಂದರೂ ಶುಲ್ಕ ಏರಿಕೆಯ ಮೇಲೆ ನಿರ್ಬಂಧ ಹೇರುವುದರ ಕುರಿತು ಯಾವ ಉಲ್ಲೇಖವೂ ಇಲ್ಲ. ಎನ್.ಇ.ಪಿ ಶಿಫಾರಸ್ಸಿನಂತೆ ರಾಜ್ಯದ ಹಲವು ಕಾಲೇಜುಗಳನ್ನು ಸ್ವಹಣಕಾಸು ಸಂಸ್ಥೆಗಳನ್ನಾಗಿ ಮಾಡಿ ಅವುಗಳಲ್ಲಿನ ಶುಲ್ಕ ಕಳೆದ 2 ವರ್ಷಗಳಲ್ಲಿ 10ಪಟ್ಟು ಹೆಚ್ಚಿಸಿರುವುದರ ಕುರಿತಾಗಿ ಸರ್ಕಾರದ ಗಮನಕ್ಕೆ ತಂದಿದ್ದರೂ ಈ ಕುರಿತು ಕ್ರಮ ಕೈಗೊಳ್ಳುವ ಭರವಸೆ ದೊರೆತ್ತಿಲ್ಲ.
ಸರ್ಕಾರವೇ ಹೇಳುವಂತೆ ಯು.ವಿ.ಸಿ.ಇ ಕಾಲೇಜಿಗೆ ಅವಶ್ಯಕವಿರುವುದು 500 ಕೋಟಿ, ಆದರೆ ಕೇವಲ 100 ಕೋಟಿಯನ್ನು ನೀಡಿ, ಉಳಿದ ಮೊತ್ತವನ್ನು ಹಳೆಯ ವಿದ್ಯಾರ್ಥಿಗಳು ಹಾಗೂ ಕಾರ್ಪೋರೇಟ್ ಕಂಪನಿಗಳ ಸಹಾಯದಿಂದ ಪಡೆಯಬೇಕೆಂದು ಹೇಳುವ ಮೂಲಕ ರಾಜ್ಯ ಸರ್ಕಾರ ಎನ್.ಇ.ಪಿ ಶಿಫಾರಸ್ಸುಗಳನ್ನು ಜಾರಿಗೊಳಿಸುತ್ತಿದೆಯೇ ಹೊರತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಒತ್ತಾಸೆಗೆ ಯಾವ ಮನ್ನಣೆಯನ್ನೂ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಾರಿ ಮತ್ತೊಮ್ಮೆ ರಾಜ್ಯದ ಬಡ – ಗ್ರಾಮೀಣ ಭಾಗದ ಶಾಲಾ ಹಾಗೂ ಪದವಿ ವಿದ್ಯಾರ್ಥಿಗಳು ಉಚಿತ ಸೈಕಲ್ – ಉಚಿತ ಲ್ಯಾಪಟಾಪ್ ಯೋಜನೆಗಳಿಂದ ವಂಚಿತರಾಗಿದ್ದಾರೆ. ಕಳೆದ 2 ವರ್ಷಗಳಿಂದ ಡಿ.ಬಿ.ಟಿ(ಡೈರೆಕ್ಟ್ ಬ್ಯಾಂಕ್ ಟ್ರಾನ್ಸಫರ್) ಜಾರಿ ತಂದಾಗಿನಿಂದಲೂ ಶಿಷ್ಯವೇತನ ಕೈಗೆ ಸಿಗದೇ ಪರದಾಡುತ್ತಿರುವ ವಿದ್ಯಾರ್ಥಿಗಳ ಅಹವಾಲಿಗೂ ರಾಜ್ಯ ಸರ್ಕಾರ ಕಿವಿಗೊಟ್ಟಿಲ್ಲ. ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಿಸಲು ಸರ್ಕಾರ ನೀಡುವ ಹಣ ಸಾಲುತ್ತಿಲ್ಲ ಎಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟರೂ, ಸರ್ಕಾರ ಶಾಶ್ವತ ಪರಿಹಾರ ನೀಡದಿರುವುದು ದುರಂತ ಎಂದು ಸುಭಾಷ್ ಬೇಸರ ವ್ಯಕ್ತಪಡಿಸಿದ್ದಾರೆ.









