ಮಡಿಕೇರಿ ಫೆ.17 NEWS DESK : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಹಮ್ಮಿಕೊಂಡಿರುವ “ಕರ್ನಾಟಕಕ್ಕಾಗಿ ನಾವು” ಜನಜಾಗೃತಿ ಬೈಕ್ ಜಾಥಾವು ಫೆ.21 ರಂದು ಕೊಡಗಿಗೆ ಆಗಮಿಸಲಿದ್ದು, ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಪ್ರಜ್ಞಾವಂತ ನಾಗರಿಕರು ಸಕ್ರಿಯವಾಗಿ ಭಾಗವಹಿಸಿ, ಬೆಂಬಲಿಸುವಂತೆ ಪಕ್ಷದ ರೈತ ಘಟಕದ ರಾಜ್ಯ ಕಾರ್ಯದರ್ಶಿ ಕೆ.ಆರ್.ಪ್ರಭುಸ್ವಾಮಿ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ, ದುರಾಡಳಿತ ಮೂಲಕ ರಾಜ್ಯದ ಜನರಿಗೆ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹಾಗೂ ಸ್ವಚ್ಛ, ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಫೆ.19 ರಿಂದ ಮಾ.2ರ ವರೆಗೆ ರಾಜ್ಯವ್ಯಾಪಿ ಬೈಕ್ ಜಾಥಾ ನಡೆಯಲಿದ್ದು, ಫೆ.21 ರಂದು ಜಿಲ್ಲೆಯ ಕುಶಾಲನಗರ, ಮಡಿಕೇರಿಪಟ್ಟಣದ ಮೂಲಕ ಜಾಥಾ ಸಾಗಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕೇಂದ್ರವಾದ ಮಡಿಕೇರಿ ನಗರದಲ್ಲಿ ಅಪರಾಹ್ನ 3 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದೆಂದು ತಿಳಿಸಿದರು.
ಕೆಆರ್‍ಎಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣರೆಡ್ಡಿ ಅವರ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಆರಂಭಗೊಳ್ಳಲಿರುವ ಬೈಕ್ ಜಾಥಾವು ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ಹೇಳಿದರು.
29 ಜಿಲ್ಲಾ ಕೇಂದ್ರಗಳು, ಐವತ್ತಕ್ಕಿಂತ ಹೆಚ್ಚು ತಾಲೂಕು ಕೇಂದ್ರಗಳು ಸೇರಿದಂತೆ ಸುಮಾರು 82 ನಗರಗಳಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು, ಮಾ.2 ರಂದು ನೆಲಮಂಗಲದಲ್ಲಿ ಬೃಹತ್ ಸಮಾರೋಪ ಸಮಾವೇಶ ನಡೆಯಲಿದೆ ಎಂದು ಪ್ರಭುಸ್ವಾಮಿ ತಿಳಿಸಿದರು.
ಕೆಆರ್‍ಎಸ್ ಪಕ್ಷದಿಂದ ಮುಂದಿನ ದಿನಗಳಲ್ಲಿ ಬರಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಾಮಾಣಿಕ ಮತ್ತು ನ್ಯಾಯಪರ ವ್ಯಕ್ತಿಗಳಿಗೆ ಮುಕ್ತ ಆಹ್ವಾನ ನೀಡಲಾಗಿದ್ದು, ಸ್ಪರ್ಧಿಸುವ ವ್ಯಕ್ತಿಗಳನ್ನು ಪಕ್ಷಕ್ಕೆ ಸ್ವಾಗತಿಸುವ ಮತ್ತು ಸೇರ್ಪಡೆ ಮಾಡುವ ಕಾರ್ಯಕ್ರಮಗಳನ್ನು ಸಹ ಜಾಥಾ ಸಂದರ್ಭದಲ್ಲಿ ಮಾಡಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಎನ್.ಜೆ.ಗಿರೀಶ್, ಎ.ಬಿ.ಪ್ರದೀಶ್ ಉಪಸ್ಥಿತರಿದ್ದರು.










