ಮಡಿಕೇರಿ ಫೆ.19 NEWS DESK : ಕೊಡವರ ಮೂಲ ಪರಂಪರೆಯ ಆಚಾರ, ವಿಚಾರ, ಭಾಷೆ, ಪದ್ಧತಿ, ಪರಂಪರೆಯ ಜೊತೆಗೆ ಕೊಡವ ಆಟ್ ಪಾಟನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಕೊಡಗಿನ ಉತ್ಸಾಹಿ ಕೊಡವ ಯುವಕ, ಯುವತಿಯರ ತಂಡ 2013 ಫೆ.18 ರಂದು ಸಂಘಟನೆಯೊಂದನ್ನು ಹುಟ್ಟು ಹಾಕಿತು. ಮುಂದೆ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಸಾರಥ್ಯದಲ್ಲಿ ಕೊಡವ ಮಕ್ಕಡ ಕೂಟ(ರಿ)ವಾಗಿ ಬೆಳೆದು ಇಂದು 11ನೇ ವರ್ಷ ಪೂರೈಸಿ 12ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ.
ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಜಂಟಿ ಕಾರ್ಯದರ್ಶಿ ಕೇಲೇಟ್ಟಿರ ದೇವಯ್ಯ ಹಾಗೂ ಖಜಾಂಚಿ ಅಮ್ಮಾಟಂಡ ಮೇದಪ್ಪ ಮತ್ತಿತರರು ಬೊಳ್ಳಜಿರ ಬಿ.ಅಯ್ಯಪ್ಪ ಅವರ ನೇತೃತ್ವದಲ್ಲಿ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಕೊಡವ ಜನಾಂಗದ ಭಾಷೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೂಟ ಅವಿರತ ಶ್ರಮ ವಹಿಸುತ್ತಿದೆ. ಕೊಡವ ಪದ್ಧತಿ, ಪರಂಪರೆ, ಆಚಾರ, ವಿಚಾರವನ್ನು ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡುತ್ತಿದೆ. ಮಡಿಕೇರಿ, ನಾಪೋಕ್ಲು ಸೇರಿದಂತೆ ಜಿಲ್ಲೆಯ ಹಲವೆಡೆ ಆಟ್‌ಪಾಟ್ ಪಡಿಪು ಶಿಬಿರದಡಿ ಮಕ್ಕಳಿಗೆ ಕೋಲಾಟ್, ಕತ್ತಿಯಾಟ್, ಪರೆಕಳಿ, ಬೊಳಕಾಟ್, ಸಂಬಂಧ ಅಡ್‌ಕ್‌ವ, ದುಡಿ ಕೊಟ್, ಕಾರ್ಯಕ್ರಮ ಸೇರಿದಂತೆ ಹೆಣ್ಣು ಮಕ್ಕಳಿಗೆ ಉಮ್ಮತಾಟ್ ತರಬೇತಿಯನ್ನು ಕೂಡ ನೀಡುತ್ತಿದೆ. ಯುವ ಪೀಳಿಗೆಯಲ್ಲಿ ಕೊಡವ ಸಂಸ್ಕೃತಿಯ ಬಗ್ಗೆ ಜಾಗೃತಿ ಹಾಗೂ ಆಸಕ್ತಿಯನ್ನು ಬೆಳೆಸುವ ಜೊತೆಗೆ ಕೊಡವರ ಪವಿತ್ರ ಗ್ರಂಥ ಪಟ್ಟೋಲೆ ಪಳಮೆಯನ್ನು ಕೊಡವ ಮಕ್ಕಳಿಗೆ ನೀಡಿ ಕೂಟ ಪ್ರೋತ್ಸಾಹಿಸಿದೆ.
ಕೊಡವ ಮಕ್ಕಡ ಕೂಟದ ಕಾರ್ಯವನ್ನು ಮೆಚ್ಚಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕೊಡವ ಸಂಸ್ಕೃತಿಯ ಧ್ಯೋತಕವಾದ ದುಡಿಯನ್ನು ಕೊಡವ ಮಕ್ಕಡ ಕೂಟಕ್ಕೆ ನೀಡಿ ಗೌರವಿಸಿದೆ. ಕೊಡವ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕೊಡಗಿನ ಹಲವೆಡೆ “ಕುಂಞಯಡ ಕೊಡವ ಜಾನಪದ ಸಾಂಸ್ಕೃತಿಕ ನಮ್ಮೆ”ಯನ್ನು ಯಶಸ್ವಿಯಾಗಿ ನಡೆಸಿದೆ.
ತಮ್ಮ ಸಾಧನೆಯ ಮೂಲಕ ತಾಯಿನಾಡಿನ ಕೀರ್ತಿ ಪತಾಕೆಯನ್ನು ಏರಿಸಿ ಅಜರಾಮರರಾಗಿರುವ ಕೊಂಗಂಡ ಗಣಪತಿ, ಹರದಾಸ ಅಪ್ಪನೆರವಂಡ ಅಪ್ಪಚಕವಿ, ದಾನಿ ಕೊರವಂಡ ನಂಜಪ್ಪ, ಸ್ವಾತಂತ್ರ್ಯ ಹೋರಾಟಗಾರ ಕೊಡಗಿನ ಗಾಂಧಿ ಎಂದೇ ಬಿರುದು ಪಡೆದ ಪಂದ್ಯಂಡ ಬೆಳ್ಯಪ್ಪ ಅವರ ಕಲ್ಲಿನ ನಾಮಫಲಕವನ್ನು ಮಡಿಕೇರಿ ನಗರದ ವಿವಿಧ ರಸ್ತೆಗಳಲ್ಲಿ ಪುನರ್ ಪ್ರತಿಷ್ಠಾಪಿಸಿ ಹಿರಿಯರಿಗೆ ಗೌರವವನ್ನು ಸಲ್ಲಿಸಿದೆ.
::: ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಸ್ಮರಣೆ :::
ದೇಶ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಶತ್ರುಗಳೊಡನೆ ಹೋರಾಡಿ ಪ್ರಾಣತೆತ್ತ ಅಪ್ರತಿಮ ವೀರ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ನೆನಪು ಕೊಡಗಿನಲ್ಲಿ ಅಜರಾಮರವಾಗಿ ಉಳಿಯಲು ಅಜ್ಜಮಾಡ ಕುಟುಂಬದ ಸಹಕಾರದೊಂದಿಗೆ ಮಡಿಕೇರಿಯ ಮುಖ್ಯರಸ್ತೆಯಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಕಂಚಿನ ಪ್ರತಿಮೆ ಸ್ಥಾಪನೆ ಮಾಡಿದ ಪರಿಶ್ರಮದ ಹಿಂದೆ ಕೊಡವ ಮಕ್ಕಡ ಕೂಟದ ಪಾತ್ರ ಪ್ರಮುಖವಾಗಿದೆ. ಪ್ರತಿವರ್ಷ ದೇವಯ್ಯನವರ ಜನ್ಮದಿನ ಹಾಗೂ ವೀರಮರಣವನ್ನಪ್ಪಿದ ದಿನವನ್ನು ಆಚರಿಸಿಕೊಂಡು ಬರುತ್ತಿರುವ ಕೂಟ ಹುತಾತ್ಮ ಯೋಧನಿಗೆ ಗೌರವ ಅರ್ಪಿಸುತ್ತಿದೆ. ಕೊಡಗಿನ ವೀರ ಯೋಧರು, ಮಾಜಿ ಸೇನಾನಿಗಳು ಹಾಗೂ ಅಜ್ಜಮಾಡ ಕುಟುಂಬ ಈ ಸ್ಮರಣಾ ದಿನದ ಕಾರ್ಯಕ್ರಮಕ್ಕೆ ಕೈಜೋಡಿಸುತ್ತಿದೆ.
ಬ್ರಿಟಿಷ್ ಸರಕಾರದಿಂದಲೇ ಬಳುವಳಿಯಾಗಿ ಬಂದಿರುವ ಕೊಡವ ಬೈರೇಸ್ ಅನ್ವಯ ಪ್ರತಿಯೊಬ್ಬ ಕೊಡವನಿಗೂ ಬಂದೂಕು ಹೊಂದುವ ವಿನಾಯಿತಿ ಪತ್ರಪಡೆಯಲು ಅವಕಾಶವಿದ್ದರೂ ಹಲವಡೆ ತೊಂದರೆಯಾದ ಸಂದರ್ಭ ಕೊಡವ ಮಕ್ಕಡ ಕೂಟ ಹೋರಾಟ ನಡೆಸಿದೆ, ಅಲ್ಲದೆ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಕೊಡವ ಜನಾಂಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹಲವು ಹೋರಾಟಗಳನ್ನು ಮಾಡಿ ಯಶಸ್ವಿಯಾಗಿದೆ.
ಕೊಡವರ ಹೊಸವರ್ಷ ಎಡಮ್ಯಾರ್ ಒಂದನ್ನು ದಕ್ಷಿಣ ಕೊಡಗಿನಿಂದ ಹಿಡಿದು ಉತ್ತರ ಕೊಡಗಿನ ಹಲವೆಡೆ ಕೊಡವ ಸಂಸ್ಕೃತಿಯ ಆಚರಣೆಯಂತೆ ಆಚರಿಸಿಕೊಂಡು ಬಂದಿದೆ. ಗದ್ದೆಗಳಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಎತ್ತುಕಟ್ಟಿ ಉಳುಮೆ ಮಾಡಿ ಹಲವು ಕುಟುಂಬದ ಐನ್‌ಮನೆಗಳಲ್ಲಿ ಎಡಮ್ಯಾರ್ ಒಂದನ್ನು ಆಚರಿಸುವ ಮೂಲಕ ದಿನದ ವಿಶೇಷತೆಯ ಬಗ್ಗೆ ಅರಿವನ್ನು ಮೂಡಿಸಿದೆ.
ಕೊಡಗಿನ ಕುಲ ದೇವರ ಮೂಲ ನೆಲೆ ತಲಕಾವೇರಿಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವ ಕಾವೇರಿ ತೀರ್ಥೋದ್ಭವದಂದು ಕೊಡವ ಮಕ್ಕಡ ಕೂಟ ಕಾವೇರಿ ಚಂಗ್ರಾಂದಿ ಯಾತ್ರೆ ಆರಂಭಿಸಿ ಯಶಸ್ವಿಯಾಗಿದೆ. ಕೊಡವ ಉಡುಪಿನಲ್ಲಿ ಹಿರಿಯರೊಂದಿಗೆ ದುಡಿಕೊಟ್ಟು ಹಾಡಿನೊಂದಿಗೆ ಸನ್ನಿದಿಗೆ ತೆರಳಿ ಕಾವೇರಿ ತಾಯಿ ತೀರ್ಥರೂಪಿಣಿಯಾಗಿ ಬರುವವರೆಗೆ ದುಡಿಕೊಟ್ಟು ಹಾಡಿನೊಂದಿಗೆ ಕುಲದೇವಿಯನ್ನು ನಮಿಸುವ ಪರಿಪಾಠವನ್ನು ಆರಂಭಿಸಿದ ಹೆಗ್ಗಳಿಕೆ ಕೂಟದ್ದಾಗಿದೆ.
::: ಪುಸ್ತಕಗಳು ಲೋಕಾರ್ಪಣೆ :::
ಕೊಡವ ಮಕ್ಕಡ ಕೂಟ ಕೊಡವ ಸಂಸ್ಕೃತಿ, ಆಚಾರ ವಿಚಾರಕ್ಕೆ ಸಂಬಧಿಸಿದ ಕೊಡವ, ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯ ದಾಖಲೆಯ ಒಟ್ಟು 83 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದೆ.
ಆಟ್ ಪಾಟ್ ಪುಸ್ತಕ (ನಾಲ್ಕನೇ ಮುದ್ರಣ), 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ, ಕೊಡವರು ಹಾಗೂ ಕಾವೇರಿ, ಮಹಾವೀರ ಅಚ್ಚುತ್ತನಾಯಕ, ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ, ಕುಂಞ ಪುಟ್ಟಲ್ಲಿ, ದಿವಾನ್ ಚೆಪ್ಪುಡಿರ ಪೊನ್ನಪ್ಪ, ಕೊಡವ ಕ್ರೀಡಾ ಕಲಿಗಳು, ಅಪ್ಪಚ್ಚ ಕವಿರ ನೆನಪು, 1785(ಲೆ.ಕ. ಪುಟ್ಟಿಚಂಡ ಎಸ್.ಗಣಪತಿ) ಕೊಡವ ಭಾಷೆಯ ಕೊಡಗ್ ರ ಸಂಗೀತ, ಸಾಹಿತ್ಯ ಕಲಾವಿದಂಗವನ್ನು ಕನ್ನಡದಲ್ಲಿ ಕೊಡಗಿನ ಸಂಗೀತ ಸಾಹಿತ್ಯ ಕಲಾವಿದರು ಎಂದು ಅನುವಾದ ಮಾಡಲಾಗಿದೆ. ಇಲ್ಲಿಯವರೆಗೆ 83 ಪುಸ್ತಕಗಳನ್ನು ಕೂಟದ ಮೂಲಕ ಬಿಡುಗಡೆಗೊಳಿಸಲಾಗಿದ್ದು, ಇನ್ನೂ 17 ಪುಸ್ತಕಗಳು ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಮಾರ್ಚ್ ಅಂತ್ಯದೊಳಗೆ ದಾಖಲೆಯ ಒಟ್ಟು 100 ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ ಎಂದು ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
::: ಪ್ರಶಸ್ತಿಗಳು :::
ಕೊಡವ ಮಕ್ಕಡ ಕೂಟ ಪ್ರಕಟಿತ 5ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭಿಸಿದೆ. ಚಿಗುರೆಲೆ ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ ಗೌರವ ದತ್ತಿನಿಧಿ ಪ್ರಶಸ್ತಿ ದೊರೆತ್ತಿದೆ. ಕೊಡವ ಮಕ್ಕಡ ಕೂಟ ಬಿಡುಗಡೆಗೊಳಿಸಿರುವ `ಕೊಡಗ್‌ರ ಸಿಪಾಯಿ” ಕಾದಂಬರಿ ಚಲನಚಿತ್ರವಾಗಿ ಜನಮನ್ನಣೆಗೆ ಪಾತ್ರವಾಗಿದೆ. ನಾಡ ಪೆದ ಆಶಾ, ಪೊಮ್ಮಾಲೆ ಕೊಡಗ್, ಬೇರ್ ಕಾದಂಬರಿ ಕೂಡ ಕೊಡವ ಚಲನಚಿತ್ರವಾಗಿ ಜನಪ್ರಿಯತೆ ಗಳಿಸಿಕೊಂಡಿದೆ, ಅಲ್ಲದೆ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಗಳನ್ನು ಗೆದ್ದಿದೆ.
ಕೊಡವ ಮಕ್ಕಡ ಕೂಟದ ಸಂಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಗೊಂಡ ಕೊಡವ ಅಧ್ಯಯನ ಪೀಠದ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕೊಡವ ಮಕ್ಕಡ ಕೂಟ ಹಲವು ವಿವಿಧ ಸಂಘ, ಸಂಸ್ಥೆಗಳೊಂದಿಗೆ ಕೈಜೋಡಿಸಿ ಕೊಡವ ಸಂಸ್ಕೃತಿ, ಆಚಾರ ವಿಚಾರ, ಭಾಷೆ, ಪದ್ಧತಿ, ಪರಂಪರೆಯ ಉಳಿವಿಗಾಗಿ ಶ್ರಮಿಸುತ್ತಾ ಬಂದಿದೆ. ಇದೇ ಫೆ.18 ರಂದು 12ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಕೊಡವ ಮಕ್ಕಡ ಕೂಟಕ್ಕೆ ಮತ್ತಷ್ಟು ಯಶಸ್ವೀ ಕಾರ್ಯಕ್ರಮಗಳನ್ನು ರೂಪಿಸುವಂತ್ತಾಗಲಿ ಎಂದು ಶುಭ ಹಾರೈಸೋಣ. (ಬರಹ : ಪುತ್ತರಿರ ಕರುಣ್ ಕಾಳಯ್ಯ)













