ಸೋಮವಾರಪೇಟೆ ಫೆ.20 NEWS DESK : ಲಂಚ ಸ್ವೀಕಾರದ ಆರೋಪದಡಿ ಸೋಮವಾರಪೇಟೆ ತಾಲ್ಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇಯರ್ ವೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಂಚ ಪಡೆದ ಆರೋಪ ಎದುರಿಸುತ್ತಿರುವ ಸರ್ವೇಯರ್ ಹೆಚ್.ಮಹದೇವಗೌಡ ಎಂಬುವವರನ್ನು ತನಿಖೆಗೆ ಒಳಪಡಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ಮಡಿಕೇರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಸರ್ವೇಯರ್ ಹೆಚ್.ಮಹದೇವಗೌಡ ಅವರನ್ನು ವಶಕ್ಕೆ ಪಡೆದರು.
ಶನಿವಾರಸಂತೆ ಹೆಮ್ಮನೆ ಗ್ರಾಮದ ನಿವಾಸಿ ಅಕ್ರಂ ಪಾಷ ಎಂಬುವವರು ತಮಗೆ ಸೇರಿದ ಜಮೀನಿಗೆ ಸಂಬಂಧಿಸಿದಂತೆ ಕಡತ ವಿಲೇವಾರಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ರೂ.5 ಸಾವಿರ ಲಂಚಕ್ಕೆ ಹೆಚ್.ಮಹದೇವಗೌಡ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ರೂ.1 ಸಾವಿರ ಮೊದಲೇ ಪಡೆಯಲಾಗಿತ್ತು, ಉಳಿದ 4 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಲೋಕಾಯುಕ್ತರು ದಾಳಿ ನಡೆಸಿದರು ಎಂದು ಹೇಳಲಾಗಿದೆ.
ಲೋಕಾಯುಕ್ತ ಪೊಲೀಸ್ ನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಮಹಾನಿರೀಕ್ಷಕ ಸುಬ್ರಮಣ್ಯೇಶ್ವರ ರಾವ್ ನೇತೃತ್ವದಲ್ಲಿ, ಲೋಕಾಯುಕ್ತ ಅಧೀಕ್ಷಕ ವಿ.ಜಿ.ಸಜೀತ್, ಕೊಡಗು ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕ ಪವನ್ ಕುಮಾರ್, ಲೋಕಾಯುಕ್ತ ವೃತ್ತ ನಿರೀಕ್ಷಕ ಲೋಕೇಶ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.










