ಮಡಿಕೇರಿ ಫೆ.26 NEWS DESK : ಕೊಡಗಿನಲ್ಲಿ ಅರಣ್ಯ, ವನ್ಯಜೀವಿಗಳು ಹಾಗೂ ಪರಿಸರ ಸಂರಕ್ಷಣೆಗಾಗಿ ತಮ್ಮ ಬದುಕಿನ ಉದ್ದಕ್ಕೂ ನಿರಂತರವಾಗಿ ಶ್ರಮಿಸಿದ ಪರಿಸರವಾದಿ ಕೆ.ಎಂ.ಚಿಣ್ಣಪ್ಪನವರು ಅರಣ್ಯ ದಂಧೆ ಮಾಡುವವರಿಗೆ ದುಃಸ್ವಪ್ನವಾಗಿದ್ದರು. ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಬಹಳ ಅಡೆತಡೆಗಳು ಮತ್ತು ಸಂಕಷ್ಟಗಳ ನಡುವೆ ಅರಣ್ಯ ಮತ್ತು ವನ್ಯಜೀವಿಗಳ ಉಳಿವಿಗೆ ಶ್ರಮಿಸಿದದ್ದಾರೆ. ತಮ್ಮ ಸೇವಾ ಕಾರ್ಯ ತತ್ಪರತೆ ಹಾಗೂ ನೇರ ನಡೆ ನುಡಿಗೆ ಹೆಸರಾಗಿದ್ದ ಚಿಣ್ಣಪ್ಪನವರು ನಿವೃತ್ತಿ ನಂತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ನಾಡಿನಾದ್ಯಂತ ಸಂಚರಿಸಿ ಶಾಲಾ – ಕಾಲೇಜು ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಉಪನ್ಯಾಸ, ಸಂವಾದ ಹಾಗೂ ಸ್ಲೈಡ್ ಪ್ರದರ್ಶನಗಳ ಮೂಲಕ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ಜನಮಾನಸದಲ್ಲಿ ಅವರ ಹೆಸರು ಅಜರಾಮವಾಗಿ ಉಳಿದಿದೆ. ಹುಲಿ ಸಂರಕ್ಷಣೆ, ಪಶ್ಚಿಮ ಘಟ್ಟಗಳು ಹಾಗೂ ನಾಗರಹೊಳೆ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸಂರಕ್ಷಣೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಯು ತಮ್ಮನ್ನು ಪರಿಸರಕ್ಕಾಗಿ ಸಂಕಲ್ಪ ತೊಡಬೇಕೆಂಬ ಸಂದೇಶವನ್ನು ಚಿಣ್ಣಪ್ಪನವರು ನಮಗೆ ಬಿಟ್ಟು ಹೋಗಿದ್ದಾರೆ. ನಾವು ಚಿಣ್ಣಪ್ಪ ಅವರೊಂದಿಗೆ ಶಾಲಾ ಕಾಲೇಜು ಹಾಗೂ ಎನ್.ಎಸ್.ಎಸ್. ಮತ್ತು ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಅವರೊಂದಿಗೆ ಬೆರೆತು ಅವರಿಂದ ಪರಿಸರ ಪಾಠ ಕಲಿತ್ತಿದ್ದೇವೆ. ಚಿಣ್ಣಪ್ಪ ಅವರ ಕಾಡಿನ ಜೀವನವು *ಕಾಡಿನೊಳಗೊಂದು ಜೀವ* ಎಂಬ ಅವರ ಆಕಾಶವಾಣಿ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸಾರವಾಗಿದ್ದು, ಇವರು ಕಾಡು, ವನ್ಯಜೀವಿಗಳು ಮತ್ತು ಪರಿಸರದ ಬಗ್ಗೆ ಹೊಂದಿದ್ದ ನಂಟು ಮತ್ತು ಅವರ ಜೀವನದ ಬಗ್ಗೆ ಲೇಖಕರಾದ ಟಿ.ಎಸ್.ಗೋಪಾಲ್ ಅವರು ಬರೆದಿರುವ ” ಕಾಡಿನೊಳಗೊಂದು ಜೀವ ” ಎಂಬ ಪುಸ್ತಕದಲ್ಲಿ ಅವರು ಕಾಡಿನ ಬಗ್ಗೆ ಹೊಂದಿದ್ದ ಅಪಾರ ಪ್ರೀತಿ ಬಗ್ಗೆ ನಾವು ಅವಲೋಕನ ಮಾಡಬಹುದಾಗಿದೆ. ಚಿಣ್ಣಪ್ಪ ಅವರ ಪರಿಸರ ಪ್ರೇಮ ಹಾಗೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಇದ್ದ ಕಾಳಜಿಯು ಇಂದಿನ ಪೀಳಿಗೆಗೆ ದಾರಿದೀಪವಾಗಿದೆ.
*ಕೆ.ಎಂ.ಚಿಣ್ಣಪ್ಪ ಅವರಿಗೆ ಒಂದು ಸಲ್ಯೂಟ್*
*ಟಿ.ಜಿ.ಪ್ರೇಮಕುಮಾರ್, ಪರಿಸರ ಕಾರ್ಯಕರ್ತ, ಅಧ್ಯಕ್ಷರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ಕುಶಾಲನಗರ, ಕೊಡಗು ಜಿಲ್ಲೆ*