ಮಡಿಕೇರಿ ಫೆ.26 NEWS DESK : ಹಿರಿಯ ಪರಿಸರ ಪ್ರೇಮಿ, ವನ್ಯಜೀವಿ ತಜ್ಞ, ನಿವೃತ್ತ ಅರಣ್ಯಾಧಿಕಾರಿ ಕೊಟ್ರಂಗಡ ಎಂ.ಚಿಣ್ಣಪ್ಪ(84) ಅವರು ಸೋಮವಾರ ನಿಧನರಾಗಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಕಾಕೂರು ಗ್ರಾಮದ ನಿವಾಸಿಯಾಗಿದ್ದ ಚಿಣ್ಣಪ್ಪ, 30 ವರ್ಷಗಳ ಕಾಲ ಅರಣ್ಯ ಇಲಾಖೆಯಲ್ಲಿ ರೇಂಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.
ತಮ್ಮ ಸೇವಾ ಅವಧಿಯಲ್ಲಿ ರಾಜ್ಯದ ಹಲವು ಅರಣ್ಯ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಕೆ.ಎಂ.ಚಿಣ್ಣಪ್ಪ ಅವರು ವನ್ಯ ಸಂಪತ್ತು ಲೂಟಿ, ವನ್ಯ ಜೀವಿಗಳ ಕಳ್ಳ ಬೇಟೆ, ಮರ ಕಳ್ಳತನ ಮತ್ತಿತ್ತರ ಅಕ್ರಮಗಳಿಗೆ ಶಾಶ್ವತ ಕಡಿವಾಣ ಹಾಕಿದ್ದರು. ಕೆ.ಎಂ.ಚಿಣ್ಣಪ್ಪ ಅವರ ಅಮೋಘ ಸೇವೆಯನ್ನು ಪರಿಗಣಿಸಿ ಸರಕಾರ 1985ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿತ್ತು. 1990ರ ದಶಕದಲ್ಲಿ ನಾಗರಹೊಳೆ ಅಭಯಾರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗ ತಮ್ಮ ಜೀವದ ಹಂಗನ್ನೇ ತೊರೆದು ಬೆಂಕಿ ನಂದಿಸಲು ಹರ ಸಾಹಸ ಪಟ್ಟಿದ್ದರು. ಚಿಣ್ಣಪ್ಪ ಅವರು ಅರಣ್ಯ ಅಧಿಕಾರಿಯಾಗಿ ಸಲ್ಲಿಸಿದ ಸೇವೆಯ ಕುರಿತು ಲೇಖಕ ಗೋಪಾಲ್ ಎಂಬುವವರು ‘ಕಾಡಿನೊಳಗೊಂದು ಜೀವ’ ಎಂಬ ಪುಸ್ತಕವನ್ನು ರಚಿಸಿದ್ದು, ಈ ಕೃತಿ ಅಪಾರ ಜನ ಮೆಚ್ಚುಗೆ ಪಡೆದಿದೆ.
ಚಿಣ್ಣಪ್ಪ ಅವರು ವನ್ಯಜೀವಿ ಸಂರಕ್ಷಣಾ ರ‍್ಯಾಲಿ ಮತ್ತು ಸಂವಾದಗಳೊಂದಿಗೆ 1.50 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳು, ಶಿಕ್ಷಕರು, ಗ್ರಾಮೀಣ ಯುವಕರು ಹಾಗೂ ಗ್ರಾಮಸ್ಥರನ್ನು ತಲುಪಿದರು. ನಿವೃತ್ತಿಯ ನಂತರವೂ 2,500 ಕ್ಕೂ ಹೆಚ್ಚು ಅರಣ್ಯ ಸಂರಕ್ಷಣಾ ಸಿಬ್ಬಂದಿಗೆ ಕಳ್ಳಬೇಟೆ ತಡೆ ಕಾರ್ಯಾಚರಣೆ ಮತ್ತು ಅಗ್ನಿಶಾಮಕ ರಕ್ಷಣೆಯಲ್ಲಿ ತರಬೇತಿ ನೀಡಿದರು.
ಕೊಟ್ರಂಗಡ ಚಿಣ್ಣಪ್ಪ ಅವರು ‘ಕೂರ್ಗ್ ವೈಲ್ಡ್ಲೈಫ್ ಫಸ್ಟ್’ ಸಂಘಟನೆ ಹುಟ್ಟುಹಾಕಿ ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಸೇವೆ ಮತ್ತು ಕೊಡುಗೆ ನೀಡಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಶಾಲಾ ಮಕ್ಕಳಿಂದ ಕಾಡ್ಗಿಚ್ಚು ಜಾಗೃತಿ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಣ್ಯ ಸಂರಕ್ಷಣೆಯ ಅರಿವು ಮೂಡಿಸುತ್ತಿದ್ದರು.
1941 ರಲ್ಲಿ ಜನಿಸಿದ ಚಿಣ್ಣಪ್ಪ ಅವರು 1967 ರಲ್ಲಿ ಅರಣ್ಯ ಸೇವೆಗೆ ಸೇರಿದರು. 1992 ರಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೊಡ್ಡ ಕಾಡ್ಗಿಚ್ಚು ಸಂಭವಿಸಿದ ನಂತರ ಸ್ವಯಂಪ್ರೇರಿತರಾಗಿ ಸೇವೆಯಿಂದ ನಿವೃತ್ತರಾದರು.
ಇವರ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ 1985 ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ, 1988 ರಲ್ಲಿ ಡಬ್ಲ್ಯುಸಿಎಸ್ ಪ್ರಶಂಸನಾ ಪತ್ರ ಮತ್ತು 1996 ರಲ್ಲಿ ಟೈಗರ್ ಲಿಂಕ್ ಬಾಗ್ ಸೇವಕ್ ಪ್ರಶಸ್ತಿ ನೀಡಲಾಗಿದೆ.
2000 ಮತ್ತು 2006 ರಲ್ಲಿ ಕ್ರಮವಾಗಿ ಇಎಸ್‌ಎಸ್‌ಒ ಮತ್ತು ಅಭಯಾರಣ್ಯದ ಜೀವಮಾನದ ಸಾಧನೆ ಪ್ರಶಸ್ತಿಗಳನ್ನು ಪಡೆದರು. 2009 ರಲ್ಲಿ ಅವರಿಗೆ ಸಿಎನ್‌ಎನ್- ಐಬಿಎನ್ ರಿಯಲ್ ಹೀರೋಸ್ ಪ್ರಶಸ್ತಿಯನ್ನು ನೀಡಲಾಯಿತು.
ಮೃತರು ಪತ್ನಿ ರಾಧ, ಪುತ್ರ ಮನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಸ್ವಗ್ರಾಮದಲ್ಲಿ ನಡೆಯಲಿದೆ.
::: ಸಂತಾಪ :::
ವನ್ಯ ಜೀವಿ ಸಂರಕ್ಷಣಾ ಕಾಯಿದೆಯನ್ನು ಅನುಷ್ಟಾನಗೊಳಿಸಿ ಅವುಗಳ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಕೊಟ್ರಂಗಡ ಎಂ.ಚಿಣ್ಣಪ್ಪ ಅವರ ಅಗಲಿಕೆಗೆ ಪರಿಸರ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳು ಕೂಡ ಚಿಣ್ಣಪ್ಪ ಅವರ ಅಗಲಿಕೆಗೆ ಕಂಬನಿ ಮಿಡಿದಿವೆ. ಈ ಕುರಿತು ಪ್ರತಿಕ್ರಿಯಿಸಿದ ವೈಲ್ಡ್ಲೈಫ್ ಫಸ್ಟ್ ಸಹ ಸಂಸ್ಥಾಪಕ ಪ್ರವೀಣ್ ಭಾರ್ಗವ್, ವನ್ಯ ಜೀವಿಗಳ ಸಂರಕ್ಷಣೆ ಕುರಿತು ತಮಗೆ ಅರಿವು ಮೂಡಿಸಿದ್ದ ಕೆ.ಎಂ.ಚಿಣ್ಣಪ್ಪ ಅವರು ತನಗೆ ಗುರುಗಳಾಗಿದ್ದರು ಎಂದು ಸ್ಮರಿಸಿದರು. ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಕೆ.ಎಂ.ಚಿಣ್ಣಪ್ಪ ಎಂಬ ದಿಗ್ಗಜರನ್ನು ನಾವಿಂದು ಕಳೆದು ಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*