ಶ್ರೀಮಂಗಲ ಫೆ.28 NEWS DESK : ಸಾಹಿತ್ಯ ರಚನೆಯಿಂದ ಆ ಜನಾಂಗದ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳ ಬೆಳವಣಿಗೆ ಸಾಧ್ಯವಾಗುವುದರೊಂದಿಗೆ ಲೇಖಕರ ಜ್ಞಾನವೂ ವೃದ್ಧಿಯಾಗುತ್ತದೆ ಎಂದು ದಾನಿಗಳಾದ ಬಾದುಮಂಡ ಚಿಮ್ಮಉತ್ತಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ರೋಟರಿ ವಿದ್ಯಾಸಂಸ್ಥೆಯಲ್ಲಿ ನಡೆದ “ಕೊಡವ ತಕ್ಕ್ ಎಳ್ತ್‌ಕಾರಡ ಕೂಟ”ದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ’ ಯೋಜನೆಯ ನೂತನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು ಮಾತೃಭಾಷೆಯ ಬೆಳವಣಿಗೆಗೆ ಆ ಭಾಷೆಯಲ್ಲಿ ಸಾಹಿತ್ಯ ಪ್ರಕಟಿಸುವುದು, ಪ್ರಕಟಿತ ಸಾಹಿತ್ಯವನ್ನು ಓದುವುದರೊಂದಿಗೆ ಮಾತೃಭಾಷೆಯಲ್ಲೇ ಮಾತನಾಡುವುದು ಅತೀ ಮುಖ್ಯ. ಕೊಡವ ಜನಾಂಗವು ತನ್ನ ಶ್ರೀಮಂತ ಸಂಸ್ಕೃತಿಯಿಂದ ಪ್ರಪಂಚದಲ್ಲೇ ಖ್ಯಾತಿಯೊಂದಿಗೆ ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆ. ಬ್ರಿಟೀಷರು ಪ್ರಪಂಚದ 68 ರಾಷ್ಟ್ರಗಳನ್ನು ಆಳಿದ್ದರೂ ಕೊಡವ ಜನಾಂಗದವರೊಂದಿಗೆ ಮಾತ್ರ ಸಹಭೋಜನ ಮಾಡಿದ್ದಾರೆ. ಇದಕ್ಕೆ ಕಾರಣ ಕೊಡವ ಜನಾಂಗದವರಿಗೆ ರಕ್ತಗತವಾಗಿ ಬಂದಿರುವ ಧೈರ್ಯ, ಶೌರ್ಯ, ನಿಯತ್ತು, ನೀತಿ-ನಿಯಮಗಳ ಪಾಲನೆ, ವಿಶೇಷ ಸಂಸ್ಕೃತಿ ಹಾಗೂ ನಂಬಿಕೆಗೆ ಅರ್ಹರಾಗಿರುವ ಜನಾಂಗ ಎಂಬುದು ಗಮನಾರ್ಹ ಸಂಗತಿ. ಇದೆಲ್ಲವನ್ನೂ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸಾಹಿತ್ಯ ಸೃಷ್ಟಿಸುವ ಹಾಗೂ ಪ್ರಕಟಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ‘ಕೊಡವ ತಕ್ಕ್ ಎಳ್ತ್‌ಕಾರಡ ಕೂಟ’ಕ್ಕೆ ಆರ್ಥಿಕ ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ‘ಕೂಟ’ ಮಾಡಿದ ಸಾಧನೆಯ ಬಗ್ಗೆ ವಿವರಿಸಿ ಯುವ ಲೇಖಕರನ್ನು ಬೆಳೆಸಲು ‘ಕೂಟ’ ಕಲಿಕಾ ಕೇಂದ್ರದ ರೀತಿ ಕಾರ್ಯ ನಿರ್ವಹಿಸುತ್ತಿದೆ. ಯುವ ಪ್ರತಿಭೆಗಳ ಪ್ರೋತ್ಸಾಹಕ್ಕೆ ಎಳ್ತ್‌ಕಾರಡ ಕೂಟವು ಸದಾ ಸಿದ್ದವಿರುತ್ತದೆ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ಬನ್ಸಿ ಪೂವಣ್ಣ ಮಾತನಾಡಿ, ಸಣ್ಣ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆ ನಡೆಸುವುದರೊಂದಿಗೆ ತಿಂಗಳಿಗೊಂದು ಕೊಡವ ಪುಸ್ತಕ ಬಿಡುಗಡೆಗೊಳಿಸುತ್ತಿರುವ ‘ಕೂಟ’ದ ಸಾಧನೆ ಶ್ಲಾಘನೀಯ. ಇನ್ನಷ್ಟು ಪುಸ್ತಕ ಪ್ರಕಟಿಸುವುದರೊಂದಿಗೆ ‘ಕೂಟ’ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಲಿ ಎಂದು ಹಾರೈಸಿದರು.
ರೋಟರಿ ಸಂಸ್ಥೆಯ ಖಜಾಂಚಿ ಅಮ್ಮಣಕುಟ್ಟಂಡ ಸರೋಜ ಮಾತನಾಡಿ, ಎಲೆ ಮರೆ ಕಾಯಿಯಂತಿರುವ ಹಲವು ಪ್ರತಿಭೆಗಳನ್ನು ಗುರುತಿಸಿ ಅವರಿಂದ ಸಾಹಿತ್ಯ ಬರೆಸಿ ಪುಸ್ತಕ ಪ್ರಕಟಿಸುವುದರೊಂದಿಗೆ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಬೆಳವಣಿಗೆಯ ನಿಟ್ಟಿನಲ್ಲಿ ಹಲವು ರೀತಿಯ ಸೇವೆ, ಸಾಧನೆ ಮಾಡುತ್ತಿರುವ ‘ಕೂಟ’ದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಅಭಿನಂದನಾರ್ಹರು. ಅವರಿಗೆ ನಾವೆಲ್ಲರೂ ಸಹಕಾರ ಕೊಡುವ. ಕೊಡವ ಭಾಷೆ, ಸಾಹಿತ್ಯದ ಬೆಳವಣಿಗೆಗೆ ‘ಕೊಡವ ತಕ್ಕ್ ಎಳ್ತ್‌ಕಾರಡ ಕೂಟ’ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ದಾನಿಗಳಾದ ಬೊಪ್ಪಂಡ ತಾರ ಕರ್0ಬಯ್ಯ ಮಾತನಾಡಿ, ಎಲ್ಲರೂ ಕೊಡವ ಭಾಷೆಯಲ್ಲೇ ಮಾತನಾಡಿದರೆ ಮಾತ್ರ ಭಾಷೆ ಬೆಳೆಯುತ್ತದೆ. ‘ಕೂಟ’ದ ವತಿಯಿಂದ ಇನ್ನಷ್ಟು ಉತ್ತಮ ಸಾಹಿತ್ಯ ಪ್ರಕಟಗೊಳ್ಳಲಿ ಎಂದು ಹಾರೈಸಿದರು.
ಲೇಖಕಿ ಚೊಟ್ಟೆಯಾಂಡಮಾಡ ಲಲಿತ ಕಾರ್ಯಪ್ಪ ಮಾತನಾಡಿ, ನಾವು ಬರೆದ ಪುಸ್ತಕದ ವಿಮರ್ಷೆಯಾದರೆ ಮುಂದೆ ಮತ್ತಷ್ಟು ಉತ್ತಮ ಸಾಹಿತ್ಯ ಸೃಷ್ಠಿಸಲು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ ಎಂದರು.
ಮತ್ತೋರ್ವ ಲೇಖಕಿ ನೂರೇರ ಸರಿತ ಉತ್ತಯ್ಯ ಪೋಷಕರು ಮಕ್ಕಳೊಂದಿಗೆ ಇಂಗ್ಲೀಷ್ ಮಾತನಾಡದೆ ಕೊಡವ ಭಾಷೆಯಲ್ಲೇ ಮಾತನಾಡಿದರೆ ಮಕ್ಕಳ ಎಳೆಯ ವಯಸ್ಸಿನಲ್ಲೇ ಭಾಷಾಭಿಮಾನ ಬೆಳೆಯುತ್ತದೆ ಎಂದರು.
ರೋಟರಿ ವಿದ್ಯಾಸಂಸ್ಥೆಯ ಮಕ್ಕಳು ಪ್ರಾರ್ಥಿಸಿ, ಸ್ವಾಗತ ನ್ರತ್ಯ ಮಾಡಿದರು. ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ವಿಶಾಲಾಕ್ಷಿ ಸ್ವಾಗತಿಸಿದರು. ಲೇಖಕಿಯರ ಹಾಗೂ ದಾನಿಗಳ ಪರಿಚಯವನ್ನು ‘ಕೂಟ’ ಸದಸ್ಯರಾದ ಬಡುವಮಂಡ ಜೀವನ್ ಹಾಗೂ ಪುಷ್ಪಾ ಶಿವರಾಮ್ ರೈ ನೆರವೇರಿಸಿದರು. ‘ಕೂಟ’ದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ನಿರೂಪಿಸಿ, ಉಪಾಧ್ಯಕ್ಷ ಚೆಂಬಾಂಡ ಶಿವಿ ಭೀಮಯ್ಯ ವಂದಿಸಿದರು.
ಈ ಸಂದರ್ಭ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಡೆಸಿದ ಕೊಡವ ಹಾಡು, ಓದುವುದು, ಕೊಡವ ಶಬ್ದ ಹೇಳುವುದು, ಆಶು ಭಾಷಣ ಹಾಗೂ ಹಾಸ್ಯ ಸ್ಪರ್ಧೆಗಳಲ್ಲಿ ವಿಜೇತರಿಗೆ ವಿಭಾಗವಾರು ಪ್ರಥಮ, ದ್ವಿತೀಯ, ತ್ರತೀಯ ಬಹುಮಾನ ನೀಡಲಾಯಿತು.