ಮಂಗಳೂರು ಮಾ.4 NEWS DESK : ಮೂವರು ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಯುವಕನೊಬ್ಬ ಆ್ಯಸಿಡ್ ದಾಳಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಸರಕಾರಿ ಕಾಲೇಜು ಆವರಣದಲ್ಲಿ ನಡೆದಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ತಯಾರಿಯಲ್ಲಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಯುವಕ ಏಕಾಏಕಿ ಆ್ಯಸಿಡ್ ಹಾಕಿದ್ದಾನೆ. ಘಟನೆಯಿಂದ ಮೂವರೂ ವಿದ್ಯಾರ್ಥಿನಿಯರು ತೀವ್ರವಾಗಿ ಗಾಯಗೊಂಡಿದ್ದು, ಕಡಬ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಓರ್ವ ವಿದ್ಯಾರ್ಥಿನಿಯನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದು, ಜೊತೆಯಲ್ಲಿದ್ದ ಗೆಳೆತಿಯರಿಗೂ ಗಂಭೀರ ಗಾಯಗಳಾಗಿದೆ.
ಕೇರಳ ಮೂಲದ ಆರೋಪಿ ಅಬೀನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ತನಿಖೆ ಮುಂದುವರೆದಿದ್ದು, ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.










