ಮಡಿಕೇರಿ ಮಾ.4 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಆಡಳಿತ ವ್ಯವಸ್ಥೆಯಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ಕಾಲೇಜು ಮುಂಭಾಗ ಮೌನ ಧರಣಿಯನ್ನು ಮುಂದುರೆಸಿದ್ದಾರೆ.
ತರಗತಿಯನ್ನು ಬಹಿಷ್ಕರಿಸಿ ಧರಣಿ ಕುಳಿತಿರುವ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಬಾಯಿಯ ಮೇಲಿನ ಮಾಸ್ಕ್ ಗೆ ಲಗತ್ತಿಸಿ ಗಮನ ಸೆಳೆಯುತ್ತಿದ್ದಾರೆ. ಕಾರ್ಯಪ್ಪ ಕಾಲೇಜ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ 43 ಉಪನ್ಯಾಸಕರಿಗೆ ಕಳೆದ 5 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ, ಜೀವನ ಸಾಗಿಸುವುದು ಕಷ್ಟಕರವಾಗಿದೆ ಎನ್ನುವುದು ಪ್ರತಿಭಟನಾಕಾರರ ಅಸಮಾಧಾನವಾಗಿದೆ.
ಕೋವಿಡ್ ಸಂದರ್ಭದ ಮೂರು ತಿಂಗಳ ವೇತನ ಸೇರಿ ಒಟ್ಟು ಎಂಟು ತಿಂಗಳ ವೇತನವನ್ನು ತಕ್ಷಣ ನೀಡಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರುವಲ್ಲಿಯವರೆಗೆ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.
ಇಂದು ಸ್ಥಳಕ್ಕೆ ನ್ಯಾಕ್ ಸಮಿತಿಯ ಸದಸ್ಯರೂ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾರಾದ ಡಾ.ಪಾರ್ವತಿ ಅಪ್ಪಯ್ಯ ಅವರು ಅತಿಥಿ ಉಪನ್ಯಾಸಕರ ಧರಣಿಯನ್ನು ಬೆಂಬಲಿಸಿ ಮಾತನಾಡಿದರು. ಕೊಡಗು ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಕೂಡ ಧರಣಿಗೆ ಬೆಂಬಲ ಸೂಚಿಸಿದರು.










