ಮಡಿಕೇರಿ ಮಾ.5 NEWS DESK : ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವರ ವಾರ್ಷಿಕ ಉತ್ಸವ ಪ್ರಯುಕ್ತ ನೆರ್ಪು ಪ್ರಯುಕ್ತ “ಎತ್ತು ಪೊರಾಟ” ಶ್ರದ್ಧಾಭಕ್ತಿಯಿಂದ ನಡೆಯಿತು.
ಕುಂದಾ ಮುಗುಟಗೇರಿ ಸಮೀಪದಲ್ಲಿರುವ ನಾಡ್ ದೇವಾಲಯ ಎಂದು ಖ್ಯಾತಿ ಪಡೆದಿರುವ ಶ್ರೀ ಈಶ್ವರ ದೇವಸ್ಥಾನ ಸಮೀಪದ ಅಂಬಲದಲ್ಲಿ ಕುಂದಾ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಅರ್ವತೋಕ್ಲು ಹಾಗೂ ಈಚೂರು ಈ ಆರು ಊರುಗಳ ತಕ್ಕಮುಖ್ಯಸ್ಥರು ಸೇರಿದಂತೆ ಶ್ರೀ ಈಶ್ವರ ದೇವಸ್ಥಾನದ ದೇವತಕ್ಕರು, ಭಂಡಾರ ತಕ್ಕರು ಆಯಾಯ ಊರುಗಳಿಂದ ತರಲಾಗಿದ್ದ ದವಸಧಾನ್ಯಗಳನ್ನು ಎತ್ತು ಪೊರಾಟದ ಮೂಲಕ ತರಲಾಯಿತು.
ದೇವಸ್ಥಾನಕ್ಕೆ ಎತ್ತು ಪೊರಾಟ ಬರುತ್ತಿದ್ದಂತೆ ಚೆಂಡೆ ಮದ್ದಳೆಯೊಂದಿಗೆ ಬರಮಾಡಿಕೊಂಡ ದೇವಸ್ಥಾನದ ಮುಖ್ಯ ಅರ್ಚಕರು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಆರು ಊರುಗಳಿಂದ ತರಲಾಗಿದ್ದ ದವಸಧಾನ್ಯಗಳನ್ನು ದೇವಸ್ಥಾನಕ್ಕೆ ಅರ್ಪಿಸಲಾಯಿತು. ನಂತರ ನೆರ್ಪು ಪ್ರಯುಕ್ತ ದೇವರ ಉತ್ಸವ ಮೂರ್ತಿಯನ್ನು ಹೊತ್ತು ವಿವಿಧ ಪೂಜಾವಿಧಿ ವಿಧಾನಗಳೊಂದಿಗೆ ಚೆಂಡೆ ವಾದ್ಯಕ್ಕೆ ಹೆಜ್ಜೆ ಹಾಕಲಾಯಿತು.
ಅಲಂಕಾರ ಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆದು ಅನ್ನ ಸಂತರ್ಪಣೆ ನಡೆಯಿತು.