ಮಡಿಕೇರಿ ಮಾ.14 NEWS DESK : ಕೇವಲ ಬರೆಯುವುದನ್ನು ಮಾತ್ರ ಸಾಹಿತ್ಯ ಸೇವೆ ಎಂದು ಹೇಳಲಾಗುವುದಿಲ್ಲ, ಬರಹವನ್ನು ಪ್ರಕಾಶನದ ರೂಪದಲ್ಲಿ ಹೊರತರುವುದು ಮತ್ತು ಜನರ ಮನೆಮನೆಗೆ ತಲುಪಿಸುವುದು ಕೂಡ ಸಾಹಿತ್ಯ ಸೇವೆ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 84ನೇ ಪುಸ್ತಕ ಬಾಚರಣಿಯಂಡ ರಾಣು ಅಪ್ಪಣ್ಣ ಅವರ “ಪ್ರಕೃತಿ ಆರಾಧನೆ ಪಿಂಞ ಕೃಷಿ ಸಂಸ್ಕೃತಿ”, 85ನೇ ಪುಸ್ತಕ “ಕೊಡಗ್‍ರ ವಾಣಿಜ್ಯ ಬೊಳೆ” ಹಾಗೂ 86ನೇ ಪುಸ್ತಕ ಬಾಚರಣಿಯಂಡ ಅಪ್ಪಣ್ಣ ಅವರ “ಜನಪದ ಸಿರಿ” ಲೋಕಾರ್ಪಣೆಗೊಂಡಿತು.
ಕೊಡವ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಾಚರಣಿಯಂಡ ಪಿ.ಅಪ್ಪಣ್ಣ ಅವರು ಹಿಂದಿನ ಕಾಲದಲ್ಲಿ ಸಾಹಿತಿಗಳಿಗೆ ಅಷ್ಟು ಪ್ರೋತ್ಸಾಹ ಸಿಗುತ್ತಿರಲಿಲ್ಲ. ಆದರೆ ಪ್ರಸ್ತುತ ದಿನಗಳಲ್ಲಿ ದೃಶ್ಯ ಮಾಧ್ಯಮ, ಶ್ರವಣ ಮಾಧ್ಯಮ ಜನರಿಗೆ ಅದರ ಸಾರವನ್ನು ತಿಳಿಸಿ, ಇಂದಿನ ಸಮಾಜವನ್ನು ಜಾಗೃತ ಮಾಡುವಲ್ಲಿ ಮುಖ್ಯ ಪಾತ್ರವಹಿಸುತ್ತಿದೆ ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎಂ.ಎ ಕೊಡವ ವಿದ್ಯಾರ್ಥಿಗಳಿಗೆ ಅಧ್ಯಯನ ನಡೆಸುವ ದೃಷ್ಟಿಯಿಂದ ತಮ್ಮ ಅನುಭವದ ವಿಷಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರಲಾಗಿದೆ ಎಂದರು.
ಆಧುನೀಕರಣಗೊಳ್ಳುತ್ತಿರುವ ಸಮಾಜದಲ್ಲಿ ಹಳೆಯ ಕಾಲದ ಬದುಕು, ಸಂಸ್ಕೃತಿ, ಜನಪದ ಕ್ರೀಡೆ, ಜಾನಪದ ರಂಗಭೂಮಿ, ವೈದ್ಯ ಪದ್ಧತಿ ಸೇರಿದಂತೆ ವಿವಿಧ ಕ್ಷೇತ್ರದ ಮಾಹಿತಿಯನ್ನು ಜನಪದ ಸಿರಿ ಪುಸ್ತಕದಲ್ಲಿ ಲಿಖಿತ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ದಾನಿಗಳ ಸಹಕಾರ ಮತ್ತು ಪ್ರೋತ್ಸಾಹದಿಂದ ಸಾಹಿತಿಗಳ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಕೊಡವ ಮಕ್ಕಡ ಕೂಟ ನಿರಂತರವಾಗಿ ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುವ ಮೂಲಕ ಹಲವು ವಿಷಯಗಳನ್ನು ಒಳಗೊಂಡ ಕನ್ನಡ, ಇಂಗ್ಲಿಷ್, ಕೊಡವ ಪುಸ್ತಕಗಳನ್ನು ಹೊರತಂದಿರುವುದು ಶ್ಲಾಘನೀಯ ಎಂದರು
ಮತ್ತೊಬ್ಬ ಹಿರಿಯ ಸಾಹಿತಿ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ ಸಾಹಿತ್ಯ ಎನ್ನುವುದು ವ್ಯಕ್ತಿಯ ಮನದಾಳದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ. ಪ್ರೋತ್ಸಾಹ ನೀಡಿದರೆ ಮಾತ್ರ ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಹಿಂದಿನ ದಿನಗಳಲ್ಲಿ ಮಾಧ್ಯಮಗಳು ಅಷ್ಟು ಪ್ರಭಾವಿಯಾಗಿರಲಿಲ್ಲ್ಲ. ಪ್ರಸ್ತುತ ದೃಶ್ಯ ಮಾಧ್ಯಮ, ಸುದ್ದಿ ಮಾಧ್ಯಮ ಹೆಚ್ಚು ಪರಿಣಾಮಕಾರಿಯಾಗಿದ್ದು, ಎಲ್ಲಾ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು.
ಕೃಷಿ ಕ್ರಾಂತಿಯಾಗಲಿ ಎನ್ನುವ ಉದ್ದೇಶದಿಂದ “ಕೊಡಗ್‍ರ ವಾಣಿಜ್ಯ ಬೊಳೆ” ಪುಸ್ತಕದಲ್ಲಿ ಪ್ರತಿಯೊಂದು ಬೆಳೆಗೆ ಸಂಬಂಧಿಸಿದ ಸಂಶೋಧನಾ ಕೇಂದ್ರ, ವೈಜ್ಞಾನಿಕ ಸಂಶೋಧನೆಯ ಫಲಿತಾಂಶ, ಬೇರೆ ಬೇರೆ ಬರಹಗಾರರ ಮತ್ತು ಸಂಶೋಧನಾ ಕೇಂದ್ರದ ಅಧಿಕಾರಿಗಳು ಪ್ರಕಟ ಪಡಿಸಿದ ಮಾಹಿತಿಯನ್ನು ಅಳವಡಿಸಲಾಗಿದೆ.
ಪ್ರಕೃತಿ ಆರಾಧನೆ ಪಿಂಞ ಕೃಷಿ ಸಂಸ್ಕೃತಿ ಪುಸ್ತಕದಲ್ಲಿ ಕೊಡಗಿನ ಜನರ ಸಂಸ್ಕೃತಿಯ ಭಾಗವಾಗಿರುವ ಪ್ರಕೃತಿ ಪೂಜೆ, ಕೊಡವ ಮೂಲ, ಹಳೇ ಕಾಲದ ಬದುಕು, ಕೊಡಗಿನ ಬೆಳೆ, ವ್ಯವಸಾಯ ಕ್ರಮ, ಬೇಟೆ ಪದ್ಧತಿ, ವಿವಿಧ ಕಾಯಿಲೆಗಳು ಸೇರಿದಂತೆ ಹಲವು ವಿಚಾರಗಳಿವೆ.
ಕೊಡವ ಮಕ್ಕಡ ಕೂಟದ ವತಿಯಿಂದ ನಿರಂತರವಾಗಿ ಸಾಹಿತ್ಯಾಸಕ್ತರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ. ಕೊಡಗಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೂಟ 100 ಕ್ಕೂ ಅಧಿಕ ಪುಸ್ತಕಗಳನ್ನು ಹೊರ ತರಲಿ ಎಂದು ಶುಭ ಹಾರೈಸಿದರು.
ಕೊಡಗ್‍ನ ವಾಣಿಜ್ಯ ಬೆಳೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೊಡಗು ಸಾಮಾಜಿಕ ಅರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಹಾಲಿ ಪ್ರಬಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಡುವಂಡ ಸುರೇಶ್ ಚಂಗಪ್ಪ, ಕೊಡವ ಮಕ್ಕಡ ಕೂಟ ಸುಮಾರು 86 ಪುಸ್ತಕಗಳನ್ನು ಹೊರ ತಂದಿದೆ. ಜೊತೆಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ಆ ಮೂಲಕ ಯುವ ಪೀಳಿಗೆಗೆ ಸಾಂಸ್ಕೃತಿಕ ಚಟುವಟಿಕೆ ಮತ್ತು ಹಿಂದಿನ ಆಚಾರ, ವಿಚಾರವನ್ನು ಮುಂದುವರೆಸಿಕೊಂಡು ಹೋಗಲು ಪ್ರೇರೆಪಿಸುತ್ತಿದೆ ಎಂದರು.
ಪ್ರಕೃತಿ ಆರಾಧನೆ ಪಿಂಞ ಕೃಷಿ ಸಂಸ್ಕೃತಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಜ್ಞಾನೋದಯ ಆಂಗ್ಲ ಮಾದ್ಯಮ ವಿದ್ಯಾಸಂಸ್ಥೆಯ ಆಡಳಿತಧಿಕಾರಿ ಹಾಗೂ ಪ್ರಾಂಶುಪಾಲರಾದ ಚೀಯಕಪೂವಂಡ ಶ್ವೇತನ್ ಚಂಗಪ್ಪ, ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ಅವರು ವಿವಿಧ ದೇಶ ಸುತ್ತಿದ್ದು, ಎಲ್ಲಾ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಇವರ ಜ್ಞಾನ ಅಪಾರ, ಇವರುಗಳು ಕೊಡಗಿನ ನಿಘಂಟು ಇದ್ದಂತೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ಕೊಡವ ಮಕ್ಕಡ ಕೂಟ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿದೆ. ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 86 ಕೃತಿಗಳನ್ನು ಬಿಡುಗಡೆ ಮಾಡಲಾಗಿದ್ದು, ಏಪ್ರಿಲ್ ಅಂತ್ಯದೊಳಗೆ 14 ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದ್ದು, ಈಗಾಗಲೇ ತಯಾರಿ ಹಂತದಲ್ಲಿದೆ. ಆ ಮೂಲಕ ಒಟ್ಟು 100 ಪುಸ್ತಕಗಳನ್ನು ಬಿಡುಗಡೆಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 83 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ “ಗೌರಮ್ಮ ದತ್ತಿ ನಿಧಿ “ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ ಎಂದು ತಿಳಿಸಿದರು.
ಪುಣ್ಯಕ್ಷೇತ್ರ ಪರಿಚಯ ಸೇರಿದಂತೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೇ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರಥಮ ಪುಸ್ತಕವನ್ನು ಕೊಡವ ಮಕ್ಕಡ ಕೂಟದ ವತಿಯಿಂದ ಹೊರತರಲಾಗಿದೆ ಎಂದರು.
ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಖಜಾಂಚಿ ಮೂವೇರ ಧರಣಿ ಗಣಪತಿ “ಜನಪದ ಸಿರಿ” ಪುಸ್ತಕ ಬಿಡುಗಡೆಗೊಳಿಸಿ, ಶುಭಹಾರೈಸಿದರು.
:: ವ್ಯಕ್ತಿ ಪರಿಚಯ ::
ಬಾಚರಣಿಯಂಡ ಪಿ.ಅಪ್ಪಣ್ಣ : ಬೇಂಗ್‍ನಾಡ್-ಕೊಳಗದಾಳ್ ಗ್ರಾಮದ ಬಾಚರಣಿಯಂಡ ಪೊನ್ನಪ್ಪ ಹಾಗೂ ಗಂಗವ್ವ ದಂಪತಿಯ ಪುತ್ರರಾಗಿರುವ ಬಾಚರಣಿಯಂಡ ಪಿ.ಅಪ್ಪಣ್ಣ 06.01.1933ರಲ್ಲಿ ಜನಿಸಿದರು. ಇವರು ಎಂ.ಎ., ಬಿ.ಇಡಿ ವ್ಯಾಸಂಗ ಮಾಡಿದ್ದು, ವಿವಿಧ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ನಂತರ ಕುಶಾಲನಗರದಲ್ಲಿ ನೆಲೆಸಿದ್ದಾರೆ.
1969ರಲ್ಲಿ ಬಿ.ಶೆಟ್ಟಿಗೇರಿ ಗ್ರಾಮದ ಕಾಳೇಂಗಡ ಮಾಚಯ್ಯ ಮತ್ತು ಅಕ್ಕವ್ವ ದಂಪತಿಯ ಮಗಳಾದ ರಾಣು (ಕೆ.ಎಂ.ಜಾನಕಿ)ನ ವಿವಾಹವಾಗಿ ವಿಂದ್ಯಾ ಹಾಗೂ ವಿಕ್ರಂ ಎಂಬ ಇಬ್ಬರು ಮಕ್ಕಳಿದ್ದು, ವೈವಾಹಿಕ ಜೀವನ ನಡೆಸುತ್ತಿದ್ದಾರೆ.
ಬಾಚರಣಿಯ ಪಿ.ಅಪ್ಪಣ್ಣ ಅವರು ಕೊಡವರ ಜಾನಪದ ಅಧ್ಯಯನ, ಹಳೆ ಕಾಲದ ವಸ್ತು ಸಂಗ್ರಹ, ಸಾಹಿತ್ಯ, ದೇಶ ವಿದೇಶಗಳಲ್ಲಿ ಅಧ್ಯಯನ ಪ್ರವಾಸಿ ಹಾಗೂ ಪ್ರವಾಸ ವರದಿ ಪ್ರಕಟ ಪಡಿಸುವುದು ಇವರ ಹವ್ಯಾಸ. ಯುರೋಪ್ ಖಂಡದ 14 ದೇಶ, ಅಮೇರಿಕಾ, ಕೆನಡಾ, ಮುಮ್ಮೂಂದ್ ಕುರಿ, ಸಿಂಗಾಪುರ, ಹಾಂಕಾಂಗ್, ಉತ್ತರ ಧ್ರುವ, ಅಲಾಸ್ಕಾ ಮಂಜಿಗಳಲೆಲ್ಲ ಅಧ್ಯಯನ ಪ್ರವಾಸ ಮಾಡಿ ಪ್ರವಾಸ ವರದಿಯನ್ನು ಬಿಡುಗಡೆಗೊಳಿಸಿದ್ದಾರೆ.
ಸಾಧಕರ ಜೀವನ ಚರಿತ್ರೆ, ಕೊಡಗಿನ ಜಾನಪದ ಕತೆ, ಕೊಡವ ಸಂಸ್ಕೃತಿಗೆ ಸಂಬಂಧಪಟ್ಟ ಪ್ರಬಂಧ ಸಂಕಲನ, ಕೊಡವ ಹಾಗೂ ಕನ್ನಡದಲ್ಲಿ ಕವನ ಸಂಕಲನ ಸೇರಿದಂತೆ 18 ಪುಸ್ತಕವನ್ನು ಪತಿ ಹಾಗೂ ಪತ್ನಿ ಸೇರಿ ಬರೆದು ಬಿಡುಗಡೆಗೊಳಿಸಿದ್ದಾರೆ.
ಇವರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ತಮ್ಮ ಬಾಲ್ಯದಲ್ಲಿ 1957ನೇ ಇಸವಿಯಲ್ಲಿ ವಿನೋಬಾ ಭಾವೆ ಅವರೊಂದಿಗೆ ಭೂದಾನ ಯಜ್ಞ ಚಳವಳಿಯಲ್ಲಿ ಕಾರ್ಯಕರ್ತನಾಗಿಯೂ, ವಿನೋಬಾ ಭಾವೆ ಅವರಿಗೆ ಕನ್ನಡ ಕಲಿಸಿರುವ ಅನುಭವ ಹೊಂದಿದ್ದಾರೆ. ಇವರ ಮನೆಯಲ್ಲಿ ಕೊಡಗಿನ ಜಾನಪದ ಸಂಸ್ಕೃತಿಗೆ ಸಂಬಂಧಿಸಿದ ಹಳೆಕಾಲದ ವಸ್ತು ಸಂಗ್ರಹಾಲಯ ಇದೆ. ಹೊರ ರಾಜ್ಯ ಹಾಗೂ ಹೊರ ದೇಶದಿಂದ ಕೊಡಗಿಗೆ ಸಂಬಂಧಪಟ್ಟ ವಿಷಯದ ಅಧ್ಯಯನಕ್ಕಾಗಿ ಬರುವವರಿಗೆ ಬೇಕಾದ ಮಾಹಿತಿನ ನೀಡುತ್ತಿದ್ದಾರೆ.
2022ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಆರಂಭಿಸಿದ ಕೊಡವ ಎಂ.ಎ. ವಿದ್ಯಾರ್ಥಿಗಳಿಗೆ ಉಪನ್ಯಾಸಕರಾಗಿ ಅಪ್ಪಣ್ಣ ಹಾಗೂ ಪತ್ನಿ ರಾಣು ಕಾರ್ಯನಿರ್ವಹಿಸಿದ್ದಾರೆ. ಮೊದಲ ಬ್ಯಾಚ್‍ನ ಎಂ.ಎ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದು, 91ರಲ್ಲೂ ಅಧ್ಯಯನ ಶೀಲರಾಗಿದ್ದಾರೆ.
ಬಾಚರಣಿಯಂಡ ರಾಣು ಅಪ್ಪಣ್ಣ : ಬಿ.ಶೆಟ್ಟಿಗೇರಿ ಗ್ರಾಮದ ಕಾಳೇಂಗಡ ಮಾಚಯ್ಯ ಹಾಗೂ ಅಕ್ಕವ್ವ ದಂಪತಿಯ ಪುತ್ರಿಯಾದ ರಾಣು (ಕೆ.ಎಂ.ಜಾನಕಿ) 12.11.1948ರಲ್ಲಿ ಜನಿಸಿದರು.
10.5.1969ರಲ್ಲಿ ಬಾಚರಣಿಯಂಡ ಅಪ್ಪಣ್ಣ ಅವರನ್ನು ವಿವಾಹವಾಗಿದ್ದಾರೆ. ಎಂ.ಎ., ಬಿ.ಇಡಿ ವ್ಯಾಸಂಗ ಮಾಡಿರುವ ಇವರು, ಕೊಡಗಿನ ವಿವಿಧ ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಇದೀಗ ಕುಶಾಲನಗರದಲ್ಲಿ ನೆಲೆಸಿದ್ದಾರೆ. ಕೂಡಿಗೆ ಉಪಾದ್ರಿ ತರಬೇತಿ ಸಂಸ್ಥೆಯಲ್ಲಿ ಈ ದಂಪತಿಗಳು ಸುಮಾರು 18 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಮಕ್ಕಳಾದ ವಿಂದ್ಯಾ ಹಾಗೂ ವಿಕ್ರಂ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ರಾಣು ಅಪ್ಪಣ್ಣ ಪ್ರಸ್ತುತ ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್‍ನ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜಾನಪದ ಅಧ್ಯಯನ, ಸಾಹಿತ್ಯ, ಅಧ್ಯಯನ ಪ್ರವಾಸ ಹಾಗೂ ಪ್ರವಾಸ ವರದಿ ಮಾಡುವುದು ಇವರ ಹಾವ್ಯಸ.
ಈ ದಂಪತಿಗಳು ಸುಮಾರು 18 ಪುಸ್ತಕ ಬರೆದು, ಬಿಡುಗಡೆಗೊಳಿಸಿದ್ದು, ಯೂರೋಪ್‍ನ 14 ದೇಶ, ಸಿಂಗಾಪುರ, ಹಾಂಗ್‍ಕಾಂಗ್, ಅಮೇರಿಕ, ಕೆನಡಾ ದೇಶದಲೆಲ್ಲ ಅಧ್ಯಯನ ಪ್ರವಾಸ ಮಾಡಿ ಕನ್ನಡದಲ್ಲಿ ಪ್ರವಾಸ ವರದಿ ಬರೆದು, ಧಾರಾವಾಹಿಯಾಗಿ ಬಿಡುಗಡೆಗೊಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ 2022ನೇ ರಲ್ಲಿ ಆರಂಭಗೊಂಡ ಕೊಡವ ಎಂ.ಎ ಮೊದಲ ತಂಡಕ್ಕೆ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಕೊಡವ ಸಂಸ್ಕೃತಿಗೆ ಸಂಬಂಧಿಸಿದ ಹಳೆ ಕಾಲದ ವಸ್ತುಗಳ ಸಂಗ್ರಹಾಲಯ ಮಾಡಿದ್ದು, ನೂತನ ಅಧ್ಯಯನಾಸಕ್ತರಿಗೆ ಸಹಾಯ ಮಾಡುತ್ತಿದ್ದಾರೆ.









