ಮಡಿಕೇರಿ ಮಾ.18 NEWS DESK : ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ನಕ್ಸಲರು ಸಂಚರಿಸಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸುಬ್ರಹ್ಮಣ್ಯ ಸಮೀಪದ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡಮಕಲ್ಲು ಬಳಿಯ ಕೂಜಿಮಲೆಯಲ್ಲಿ ನಾಲ್ವರಿಂದ ಐದು ಮಂದಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕೂಜಿಮಲೆ ಕಡಮಕಲ್ಲು ಭಾಗದ ಅಂಗಡಿಯೊಂದರಲ್ಲಿ ಅಪರಿಚಿತರು ದಿನಸಿ ಸಾಮಾಗ್ರಿ ಖರೀದಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಗುಂಪಿನಲ್ಲಿ ಇಬ್ಬರು ಮಹಿಳೆಯರೂ ಇದ್ದಾರೆ. ಶನಿವಾರ ಸಂಜೆ ನಡೆದ ಈ ಪ್ರಕರಣ ಹಲವು ಸಂಶಯಗಳನ್ನು ಹುಟ್ಟು ಹಾಕಿರುವ ಹಿನ್ನೆಲೆ ನಕ್ಸಲರ ಸಂಚಾರದ ಕುರಿತು ಶಂಕೆ ವ್ಯಕ್ತವಾಗಿದೆ. ಕೂಜಿಮಲೆ ಕಡಮಕಲ್ಲು ಬೆಟ್ಟ ಪ್ರದೇಶದಿಂದ ಕೂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರದೇಶ ವ್ಯಾಪಿಸಿದೆ. ಕಾರ್ಕಳದಿಂದ ಬಂದಿರುವ ನಕ್ಸಲ್ ನಿಗ್ರಹ ದಳ ಕೂಂಬಿಂಗ್ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. 2012 ರಲ್ಲಿ ಮಡಿಕೇರಿ ತಾಲ್ಲೂಕಿನ ಕಾಲೂರು ಗ್ರಾಮದಲ್ಲಿ ಮತ್ತು 2018 ರಲ್ಲಿ ಸಂಪಾಜೆಯ ಗುಡ್ಡೆಗದ್ದೆಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ಇದೀಗ ಕೂಜಿಮಲೆ ಕಡಮಕಲ್ಲು ಭಾಗದಲ್ಲಿ ನಕ್ಸಲ್ ಸಂಚಾರದ ಶಂಕೆ ವ್ಯಕ್ತವಾಗಿದ್ದು, ಲೋಕಸಭಾ ಚುನಾವಣೆಯ ಹಿನ್ನೆಲೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಸಾಂದರ್ಭಿಕ ಚಿತ್ರ