ಗೋಣಿಕೊಪ್ಪ ಮಾ.23 NEWS DESK : ರಾಮ ರಾಜ್ಯದ ಕನಸು ನನಸಾಗುತ್ತಿದೆ, ದೇಶವನ್ನು ಮತ್ತಷ್ಟು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಗೆಲ್ಲಿಸಬೇಕಾದ ಅನಿವಾರ್ಯತೆ ಇದೆ ಎಂದು ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ತಿಳಿಸಿದ್ದಾರೆ.
ತಿತಿಮತಿ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ನಡೆದ ತಿತಿಮತಿ, ಬಾಳೆಲೆ, ಪೊನ್ನಪ್ಪಸಂತೆ, ಮಾಯಮುಡಿ, ದೇವರಪುರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾವೇರಿ ತವರು ಕೊಡಗು ಮತ್ತು ಮೈಸೂರಿಗೂ ಅವಿನಾಭಾವ ಸಂಬ0ಧವಿದೆ. ಈ ಭಾಗದ ಜನರ ಸೇವೆ ಮಾಡುವ ಆಕಾಂಕ್ಷೆಯೊ0ದಿಗೆ ಚುನಾವಣೆ ಕಣಕ್ಕೆ ಇಳಿದಿದ್ದೇನೆ. ಪಕ್ಷದ ಆತ್ಮ ಬಲವಾಗಿರುವ ಕಾರ್ಯಕರ್ತರು ದೇಶ ಮುನ್ನಡೆಸುವ ಮತ್ತು ಅಭಿವೃದ್ಧಿಪಡಿಸುವ ಕರ್ತವ್ಯಕ್ಕಾಗಿ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ದೇಶ ಅಭಿವೃದ್ಧಿಯತ್ತ ಸಾಗುತ್ತಿದ್ದು, ಪ್ರಪಂಚವೇ ನಿಬ್ಬೆರಗಾಗಿ ನೋಡುವ ವಾತಾವರಣ ಸೃಷ್ಟಿಯಾಗಿದೆ. ಹಿಂದೆ ಅರಸು ಮನೆತನದವರು ಮೈಸೂರು ರಾಜ್ಯವನ್ನು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಸ್ವದೇಶಿ ಉತ್ಪನ್ನಗಳಿಗೆ ಸಾಕಷ್ಟು ಒತ್ತು ನೀಡಿ ಮೈಸೂರು ಬ್ರಾಂಡ್‌ನಲ್ಲಿ ಪ್ರಚಾರ ಮತ್ತು ಮಾರಾಟ ಮಾಡಲಾಗುತ್ತಿತ್ತು. ಅದೇ ಮಾದರಿಯಲ್ಲಿ ಇಂದು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಸ್ವದೇಶಿ ಉತ್ಪನ್ನಗಳ ಬಳಕೆಗೆ ಆದ್ಯತೆಯನ್ನು ನೀಡುತ್ತಿದೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಪಣತೊಟ್ಟಿದೆ ಎಂದು ಹೇಳಿದರು.
ರಾಮ ರಾಜ್ಯದ ಕನಸು ನನಸಾಗುತ್ತಾ ಸಾಗುತ್ತಿದೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಪ್ರಪಂಚಕ್ಕೆ ತಿಳಿಸಲಾಗಿದೆ. ಸರ್ಕಾರದ ಯೋಜನೆಗಳು ಮತ್ತು ಉದ್ದೇಶಗಳನ್ನು ಜನರಿಗೆ ತಿಳಿಸುವ ಕೆಲಸ ಕಾರ್ಯಕರ್ತರಿಂದ ನಿರಂತರವಾಗಿ ಆಗಬೇಕಾಗಿದೆ ಎಂದರು.
ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ ಚುನಾವಣೆಯ ಯುದ್ಧಕ್ಕೆ ದೇಶವೇ ಸಜ್ಜಾಗಿದೆ. ದೇಶದ ಸುಧಾರಣೆಗಾಗಿ ಮೋದಿ ಸರ್ಕಾರದ ಗೆಲುವಿಗೆ ಕಾರ್ಯಕರ್ತರು ಪರಿಶ್ರಮ ಪಡಬೇಕಾಗಿದೆ. ಕೊಡಗಿನಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ ಪ್ರತಿ ಕಾಲೋನಿಗಳಿಗೆ ಕಾಂಕ್ರಿಟ್ ರಸ್ತೆ, ಕುಡಿಯುವ ನೀರು, ಶೌಚಾಲಯ, ಸಮುದಾಯ ಭವನ ನೀಡಲಾಗಿದೆ. ದೇವಸ್ಥಾನ, ಚರ್ಚ್, ಮಸೀದಿಗಳ ಅಭಿವೃದ್ಧಿಯು ನಿರಂತರವಾಗಿ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಕೊಡಗಿನಲ್ಲಿ ಬಿಜೆಪಿಯ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಚ್ಯುತಿ ಬಾರದ ಹಾಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಜನರು ಶಾಂತಿಯುತವಾದ ಬದುಕು ನಡೆಸಬೇಕೆಂದರೆ ಮೋದಿ ಸರ್ಕಾರದ ಅಗತ್ಯವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಗೊಂಡು ಎಂಟು ತಿಂಗಳ ಅವಧಿಯಲ್ಲಿ ವಿಧಾನಸೌದದಲ್ಲಿ ಪಾಕಿಸ್ತಾನಕ್ಕೆ ಜಯಘೋಷ ಹಾಕುವ ಮೂಲಕ ಆತಂಕ ಸೃಷ್ಟಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪ0ಡ ಸುಜಾ ಕುಶಾಲಪ್ಪ ಮಾತನಾಡಿ, ದೇಶದ ಭದ್ರತೆಗಾಗಿ ಮತ್ತು ಉಳಿವಿಗಾಗಿ ಮೋದಿ ಸರ್ಕಾರವನ್ನು ಬೆಂಬಲಿಸುವ ಅಗತ್ಯವಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ವಿರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್, ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ, ರಾಜ್ಯ ಶಿಸ್ತು ಸಮಿತಿ ಸದಸ್ಯ ಪಟ್ಟಡ ರೀನಾ ಪ್ರಕಾಶ್, ಮಾಪಂಗಡ ಯಮುನಾ ಚಂಗಪ್ಪ, ಚುನಾವಣಾ ಉಸ್ತುವಾರಿಗಳಾದ ಡಾ.ವಿಕಾಸ್, ಡಾ.ವಸಂತ್ ಕುಮಾರ್, ಪಕ್ಷದ ಮುಖಂಡ ಅಡ್ಡಂಡ ಕಾರ್ಯಪ್ಪ, ಕುಂಞ0ಗಡ ಅರುಣ್ ಭೀಮಯ್ಯ, ತಾಲ್ಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಅಜಿತ್ ಕರುಂಬಯ್ಯ, ಮುದ್ದಿಯಡ ಮಂಜು ಗಣಪತಿ, ಶಕ್ತಿ ಕೇಂದ್ರದ ಪ್ರಮುಖರು, ಸಹ ಪ್ರಮುಖರು, ಭೂತ್ ಅಧ್ಯಕ್ಷರುಗಳು, ವಿವಿಧ ಮೋರ್ಚಾ ಪದಾಧಿಕಾರಿಗಳು, ಪಂಚಾಯತ್ ಅಧ್ಯಕ್ಷರುಗಳು, ಸದಸ್ಯರುಗಳು, ಪಕ್ಷದ ಕಾರ್ಯಕರ್ತರು ಇದ್ದರು.










