ಸಿದ್ದಾಪುರ ಮಾ.25 NEWS DESK : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಕೊಡಗಿನ ವಿವಿಧೆಡೆ ಪ್ರಚಾರವನ್ನು ಬಿರುಸುಗೊಳಿಸಿದ್ದಾರೆ.
ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಸಿದ್ದಾಪುರಕ್ಕೆ ಆಗಮಿಸಿದ ಅವರನ್ನು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ಪಾಲಿಬೆಟ್ಟ, ಸಿದ್ದಾಪುರ, ಅಮ್ಮತ್ತಿ, ಚನ್ನಯ್ಯನಕೋಟೆ, ಮಾಲ್ದಾರೆ, ನೆಲ್ಯಹುದಿಕೇರಿ ಪಂಚಾಯಿತಿ ವ್ಯಾಪ್ತಿಯ ನೂರಾರು ಕಾರ್ಯಕರ್ತರು ಚಂಡೆ ವಾದ್ಯ ಮೇಳಗಳೊಂದಿಗೆ ಸ್ವಾಗತಿಸಿದರು.
ನಂತರ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಅಭ್ಯರ್ಥಿ ಯದುವೀರ್ ಒಡೆಯರ್ ಮಾತನಾಡಿ ದೇಶವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಗೆಲ್ಲಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಕಾವೇರಿ ತವರು ಕೊಡಗು ಮತ್ತು ಮೈಸೂರಿಗೂ ಅವಿನಭಾವ ಸಂಬಂಧವಿದೆ, ಈ ಭಾಗದ ಜನರ ಸೇವೆ ಮಾಡುವ ಆಕಾಂಕ್ಷೆಯೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ. ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರು ಭವಿಷ್ಯದ ಚಿಂತನೆಯೊAದಿಗೆ ಪಕ್ಷವನ್ನು ಗೆಲ್ಲಿಸಬೇಕಾಗಿದೆ ಎಂದು ಕರೆ ನೀಡಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಕೊಡಗಿನಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ ಪ್ರತಿ ಗ್ರಾಮೀಣ ಭಾಗದಲ್ಲೂ ಕಾಂಕ್ರೀಟ್ ರಸ್ತೆ, ಕುಡಿಯುವ ನೀರು, ಶೌಚಾಲಯ, ಸಮುದಾಯ ಭವನ ನೀಡಲಾಗಿದೆ. ದೇವಸ್ಥಾನ, ಚರ್ಚ್, ಮಸೀದಿಗಳ ಅಭಿವೃದ್ಧಿಯು ನಿರಂತರವಾಗಿ ನಡೆದಿದೆ. ಕೊಡಗಿನಲ್ಲಿ ಬಿಜೆಪಿ ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದರು.
ವಿರಾಜಪೇಟೆ ತಾಲ್ಲೂಕು ಮಂಡಲ ಅಧ್ಯಕ್ಷ ಸುವಿನ್ ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ನೆಲ್ಲಿರ ಚಲನ್ ಕುಮಾರ್, ವಿ.ಕೆ.ಲೋಕೇಶ್, ತಾಲ್ಲೂಕು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅಜಿತ್ ಕರುಂಬಯ್ಯ, ಮಂಜು ಗಣಪತಿ, ಶಕ್ತಿ ಕೇಂದ್ರ ಪ್ರಮುಖರು, ಬೂತ್ ಅಧ್ಯಕ್ಷರುಗಳು, ವಿವಿಧ ಮೋರ್ಚಾ ಪದಾಧಿಕಾರಿಗಳು, ಪಂಚಾಯತ್ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.










