ಮಡಿಕೇರಿ ಮಾ.27 NEWS DESK : ಬೆಳ್ಳಂಬೆಳ್ಳಗೆ ಕೊಡಗಿನ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿಯಾಗಿದೆ.
ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬಕ್ಕೆ ಚುನಾವಣೆ ಹಿನ್ನೆಲೆ ವರ್ಗಾವಣೆಗೊಂಡಿರುವ ಜಯಣ್ಣ ಅವರ ಕುಶಾಲನಗರದ ಶಿವರಾಮ ಕಾರಂತ ಕಾಲೋನಿಯಲ್ಲಿರುವ ಮನೆ ಹಾಗೂ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್ ಫಯಾಜ್ ಅಹಮ್ಮದ್ ಅವರ ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿರುವ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೊಡಗು ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ ಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದು, ತನಿಖೆ ಮುಂದುವರೆದಿದೆ. ಇಬ್ಬರು ಅಧಿಕಾರಿಗಳ ಕಚೇರಿ ಮತ್ತಿತರ ಆಸ್ತಿಗಳ ಪರಿಶೀಲನೆಯೂ ನಡೆದಿದೆ.
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಭಿಯಂತರ ಫಯಾಜ್ ಅಹಮ್ಮದ್ ಅವರ ಕುಶಾಲನಗರದ ಮನೆ ಮೇಲೆ ಲೋಕಾಯುಕ್ತ ಧಾಳಿ ನಡೆಸಿದ ನಂತರ, ಸೋಮವಾರಪೇಟೆಗೆ ಕರೆತಂದು, ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿ, ಹಲವು ದಾಖಲೆಗಳನ್ನು ಪರಿಶೀಲಿಸಿದರು.
ಕುಶಾಲನಗರದಿಂದ ಆಗಮಿಸಿದ ಲೋಕಾಯುಕ್ತ ಇನ್ಸ್ಪೆಕ್ಟರ್ ಅನಂತರಾಮ್ ಸೇರಿದಂತೆ ಐವರು ಸಿಬ್ಬಂದಿಗಳು, ಸೋಮವಾರಪೇಟೆಯಲ್ಲಿರುವ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿ ಬೆಳಗ್ಗಿನಿಂದಲೇ ಪರಿಶೀಲನೆ ನಡೆಸಿದರು.
ಸೋಮವಾರಪೇಟೆ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫಯಾಜ್ ಅಹಮ್ಮದ್ ಅವರು ಕಚೇರಿಯಲ್ಲಿ ಹುಡುಕಾಟ ನಡೆಸಿದ ಅಧಿಕಾರಿಗಳು, ತನಿಖೆಗೆ ಪೂರಕವಾಗಿದ್ದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದರು.












