ಸೋಮವಾರಪೇಟೆ ಮಾ.27 NEWS DESK : ಲೋಕಸಭಾ ಚುನಾವಣೆಯ ಕಾವು ಏರತೊಡಗಿದ್ದು, 28 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಸುಲಲಿತ ಹಾಗೂ ಕಟ್ಟುನಿಟ್ಟಿನ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಲ್ಲಲ್ಲಿ ಚೆಕ್ ಪೋಸ್ಟ್ ಗಳ ಮೂಲಕ ಹಣ ಮತ್ತಿತರೆ ಆಮಿಷದ ವಸ್ತುಗಳ ಸಾಗಾಟಕ್ಕೆ ಹದ್ದಿನ ಕಣ್ಣಿರಿಸಿದೆ. ಆದರೆ ಇಂಥ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕನಿಷ್ಠ ಮೂಲಬೂತ ಸೌಕರ್ಯ ಒದಗಿಸದೆ ಇರುವುದು ವಿಪರ್ಯಾಸ.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸೋಮವಾರಪೇಟೆಗೆ ಸಮೀಪದ ಹಾಸನ ಕೊಡಗು ಗಡಿಭಾಗದ ಬಾಣಾವಾರಗೇಟ್ ನಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಶಾಮಿಯಾನ ಅಥವಾ ತಾತ್ಕಾಲಿಕ ಶೇಡ್ ಕೂಡ ನಿರ್ಮಿಸದೆ ಅಧಿಕಾರಿಗಳು ಸುಡುಬಿಸಿಲಿನಲ್ಲಿಯೆ ಕುಳಿತು ಕಾರ್ಯ ನಿರ್ವಹಿಸಿದರೆ ಆನೆಯ ಹಾವಳಿ ಇರುವ ಇಲ್ಲಿ ರಾತ್ರಿಯವೇಳೆ ಯಾವುದೇ ರಕ್ಷಣೆ ಇಲ್ಲದೆ ಜೀವ ಕೈಯಲ್ಲಿ ಹಿಡಿದು ಕರ್ತವ್ಯ ನಿರ್ವಹಿಸುವಂತಾಗಿದೆ. ಸರಕಾರ ಚುನಾವಣೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚಮಾಡುವಾಗ ಚುನಾವಣಾ ಕರ್ತವ್ಯ ವಿರ್ವಹಿಸುವ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕನಿಷ್ಠ ಸೌಲಭ್ಯ ಒದಗಿಸದೇ ಇರುವುದು ಶೋಚನೀಯ.













