ಮಡಿಕೇರಿ ಮಾ.27 NEWS DESK : ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಳ ಮಾಡುವಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಆ ದಿಸೆಯಲ್ಲಿ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ವಿಡಿಯೋ ಸಂವಾದ ಮೂಲಕ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಯಿತು.
ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿ ಕಡಿಮೆ ಮತದಾನವಾದ ಮತಗಟ್ಟೆಗಳನ್ನು ಗುರುತಿಸಿ ಮತದಾನ ಹೆಚ್ಚಳಕ್ಕೆ ಮುಂದಾಗಬೇಕು. ಆ ನಿಟ್ಟಿನಲ್ಲಿ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿ.ಪಂ.ಸಿಇಒ ಅವರು ನಿರ್ದೇಶನ ನೀಡಿದರು.
ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದರೆ ಕೂಡಲೇ ಸಿ-ವಿಜಿಲ್ ಆಪ್ ಮೂಲಕ ದೂರು ದಾಖಲಿಸಿ ಪ್ರಕರಣ ಇತ್ಯರ್ಥಪಡಿಸಬೇಕು ಎಂದು ಜಿ.ಪಂ.ಸಿಇಒ ಅವರು ಸೂಚಿಸಿದರು.
ಅಧಿಕಾರಿಗಳು ತಂಡೋಪಾದಿಯಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾ.ಪಂಇಒ ಎಲ್ಲರೂ ಒಟ್ಟುಗೂಡಿ ಮತದಾನ ಹೆಚ್ಚಳಕ್ಕೆ ಶ್ರಮಿಸಬೇಕು ಎಂದರು.
ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಶೇಖರ್ ಅವರು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ಮತದಾನದ ಮಹತ್ವ ಕುರಿತು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ನಗರಸಭೆ ಪೌರಾಯುಕ್ತರಾದ ವಿಜಯ್, ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಇತರರು ತಮ್ಮ ವ್ಯಾಪ್ತಿಯಲ್ಲಿ ಕಾರ್ಯಚಟುವಟಿಕೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.
ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ಮಾರ್ಚ್, 28 ರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಪಟ್ಟಿ ಇಂತಿದೆ.
ಸ್ವೀಪ್ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ಮಾರ್ಚ್ 28 ರಿಂದ ನಡೆಯುವ ಕಾರ್ಯಕ್ರಮದ ಪಟ್ಟಿ ಇಂತಿದೆ.
ರಂಗೋಲಿ ಸ್ಪರ್ಧೆಯು ಮಾರ್ಚ್, 28 ರಂದು ಮಡಿಕೇರಿ ನಗರ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯಲಿದೆ. ಮಾರ್ಚ್, 30 ರಂದು ಸೋಮವಾರಪೇಟೆ ಪಟ್ಟಣ ಹಾಗೂ ತಾಲ್ಲೂಕಿನ ಎಲ್ಲಾ ಗ್ರಾ.ಪಂ.ಗಳಲ್ಲಿ, ಏಪ್ರಿಲ್, 01 ರಂದು ಕುಶಾಲನಗರ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ, ಏಪ್ರಿಲ್, 02 ರಂದು ವಿರಾಜಪೇಟೆ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ, ಏಪ್ರಿಲ್, 03 ರಂದು ಪೊನ್ನಂಪೇಟೆ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ರಂಗೋಲಿ ಸ್ಪರ್ಧೆ ನಡೆಯಲಿದೆ.
ಚಿತ್ರಕಲಾ ಸ್ಪರ್ಧೆಯು ಏಪ್ರಿಲ್, 04 ರಂದು ಮಡಿಕೇರಿ ನಗರಸಭೆ ಹಾಗೂ ತಾಲ್ಲೂಕಿನ ಎಲ್ಲಾ ಗ್ರಾ.ಪಂ.ವ್ಯಾಪ್ತಿಗಳಲ್ಲಿ ನಡೆಯಲಿದೆ. ಏಪ್ರಿಲ್, 05 ರಂದು ಸೋಮವಾರಪೇಟೆ ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ನಡೆಯಲಿದೆ. ಏಪ್ರಿಲ್, 06 ರಂದು ಕುಶಾಲನಗರ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯಲಿದೆ. ಏಪ್ರಿಲ್, 08 ರಂದು ವಿರಾಜಪೇಟೆ ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ಜರುಗಲಿದೆ. ಹಾಗೆಯೇ ಏಪ್ರಿಲ್, 10 ರಂದು ಪೊನ್ನಂಪೇಟೆ ಪಟ್ಟಣ ಹಾಗೂ ತಾಲ್ಲೂಕಿನ ಎಲ್ಲಾ ಗ್ರಾ.ಪಂ.ಗಳಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ಕಾಲುನಡಿಗೆ ಜಾಥವೂ ಏಪ್ರಿಲ್, 12 ರಂದು ಮಡಿಕೇರಿಯಲ್ಲಿ, ಏ.13 ರಂದು ಸೋಮವಾರಪೇಟೆ, ಏ.15 ರಂದು ಕುಶಾಲನಗರ, ಏ.16 ರಂದು ವಿರಾಜಪೇಟೆ ಮತ್ತು ಏ.17 ರಂದು ಪೊನ್ನಂಪೇಟೆಯಲ್ಲಿ ನಡೆಯಲಿದೆ.
ಸೈಕಲ್/ ಬೈಕ್ ರ್ಯಾಲಿಯು ಏಪ್ರಿಲ್, 18 ರಂದು ಮಡಿಕೇರಿ, ಏಪ್ರಿಲ್, 19 ರಂದು ಸೋಮವಾರಪೇಟೆ, ಏ.20 ರಂದು ಕುಶಾಲನಗರ, ಏಪ್ರಿಲ್, 22 ರಂದು ವಿರಾಜಪೇಟೆ ಮತ್ತು ಏಪ್ರಿಲ್, 23 ರಂದು ಪೊನ್ನಂಪೇಟೆಯಲ್ಲಿ ನಡೆಯಲಿದೆ.
ಹಾಗೆಯೇ ವಿಶೇಷ ಚೇತನರಿಗೆ ಆದ್ಯತೆ ನೀಡುವಲ್ಲಿ ತ್ರಿಚಕ್ರ ಬೈಸಿಕಲ್ ರ್ಯಾಲಿಯು ಏಪ್ರಿಲ್, 24 ರಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯಲಿದೆ. ಮತದಾನ ಹೆಚ್ಚಳಕ್ಕೆ ಜಾಗೃತಿ ಮೂಡಿಸುವುದು, ಹಾಗೆಯೇ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವುದು ಆದ್ಯತೆಯಾಗಿದೆ ಎಂದು ನೋಡಲ್ ಅಧಿಕಾರಿ ಶೇಖರ್ ವಿವರಿಸಿದರು.












